ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಬಲಿಷ್ಠ ತಂಡಗಳಾದ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು(ಮಂಗಳವಾರ ಮಾರ್ಚ್ 7) ಮುಖಾಮುಖಿಯಾಲಿವೆ. ಉಭಯ ತಂಡಗಳು ಆಡಿದ ಮೊದಲ ಪಂದ್ಯದನ್ನು ಗೆದ್ದು ಬೀಗಿದೆ. ಇದೀಗ ತಮ್ಮ ಗೆಲುವಿನ ನಾಗಲೋಟವನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿಯೂ ಶಕ್ತಿ ಮೀರಿ ಪ್ರದರ್ಶನ ತೋರುವ ಸಾಧ್ಯತೆ ಇದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಕಳೆದ ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಸ್ಫೋಟಕ ಆಟವಾಡಿದ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮಾ ಮತ್ತು ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಬೌಲಿಂಗ್ನಲ್ಲಿ 5 ವಿಕೆಟ್ ಕಿತ್ತು ಮಿಂಚಿದ ತಾರಾ ನೋರಿಸ್ ಮೇಲೆ ಈ ಪಂದ್ಯದಲ್ಲಿಯೂ ತಂಡ ಹೆಚ್ಚಿನ ಭರವಸೆ ಇರಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್ ಮತ್ತು ಮರಿಜಯಾನ್ ಕಾಪ್ ಬಿರುಸಿನ ಬ್ಯಾಟಿಂಗ್ ನಡೆಸುವ ಕಾರಣ ತಂಡದ ಬೃಹತ್ ಮೊತ್ತಕ್ಕೇನು ಅಡ್ಡಿಯಿಲ್ಲ. ಒಟ್ಟಾರೆ ಡೆಲ್ಲಿ ತಂಡ ಸಮರ್ಥವಾಗಿ ಕಾಣಿಸಿಕೊಂಡಿದೆ.
ಇದನ್ನೂ ಓದಿ WPL 2023: ಬೌಂಡರಿ ಲೈನ್ ಬಳಿ ಭಾಂಗ್ರಾ ನೃತ್ಯ ಮಾಡಿದ ಜೆಮಿಮಾ ರೋಡ್ರಿಗಸ್; ವಿಡಿಯೊ ವೈರಲ್
ಯುಪಿ ವಾರಿಯರ್ಸ್ ತಂಡವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಅಸಾಧ್ಯವಾದುದನ್ನು ಸಾಧ್ಯ ಎಂದು ತೋರಿಸಿಕೊಡುವಲ್ಲಿ ಯುಪಿ ಎತ್ತಿದ ಕೈ. ಇದಕ್ಕೆ ಕಳೆದ ಗುಜರಾತ್ ಜೈಂಟ್ಸ್ ವಿರುದ್ದದ ಪಂದ್ಯವೇ ಉತ್ತಮ ನಿದರ್ಶನ. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಯುಪಿ 20 ರನ್ ಗಳಿಸಿದ ವೇಳೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸೋಲು ಕಾಣುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಗ್ರೇಸ್ ಹ್ಯಾರಿಸ್ ಅಜೇಯ 59 ರನ್ ಸಿಡಿಸಿ ಯಾರು ಊಹಿಸದ ರೀತಿಯಲ್ಲಿ ತಂಡಕ್ಕೆ ಮೂರು ವಿಕೆಟ್ಗಳ ರೋಚಕ ಗೆಲುವು ತಂದು ಕೊಟ್ಟರು. ಹೀಗಾಗಿ ಯುಪಿ ಸವಾಲನ್ನು ಕಡೆಗಣಿಸುವಂತಿಲ್ಲ.