ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯವನ್ನು ಐಪಿಎಲ್ನ ಪುರುಷರ ತಂಡವಾದ ಮುಂಬೈ ಇಂಡಿಯನ್ಸ್ ವೀಕ್ಷಿಸಿದೆ.
ಬ್ರಬೊರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಈ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬಯಿ ಇಂಡಿಯನ್ಸ್ ಬೌಲರ್ಗಳಾದ ಇಸ್ಸಿ ವಾಂಗ್ ಮತ್ತು ಹೇಲಿ ಮ್ಯಾಥ್ಯೂಸ್ ಅವರ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಬಾರಿಸಿ ಸವಾಲೊಡ್ಡಿದೆ. ಮುಂಬೈ ಗೆಲುವಿಗೆ 132 ರನ್ ಬಾರಿಸಬೇಕಿದೆ.
ಈ ಪಂದ್ಯವನ್ನು ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ಬಳಗವು ವೀಕ್ಷಿಸುವ ಮೂಲಕ ತನ್ನ ಒಡೆತದ ಮಹಿಳಾ ತಂಡಕ್ಕೆ ಬೆಂಬಲ ಸೂಚಿಸಿದೆ. ಅಚ್ಚರಿ ಎಂದರೆ ನ್ಯೂಜಿಲ್ಯಾಂಡ್ನಲ್ಲಿ ಬೆನ್ನು ನೋವಿನ ಶಸ್ತ್ರಚಿಕಿತ್ಸೆ ಒಳಗಾದ ಜಸ್ಪ್ರೀತ್ ಬುಮ್ರಾ ಈ ಪಂದ್ಯಕ್ಕೆ ಆಗಮಿಸಿದರು. ಈ ಮೂಲಕ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡರು. ಇದಕ್ಕೂ ಮುನ್ನ ನಡೆದ ಲೀಗ್ ಪಂದ್ಯದ ವೇಳೆಯೂ ಮುಂಬೈ ತಂಡದ ಆಟಗಾರರಾದ ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್ ಸೇರಿ ಹಲವು ಆಟಗಾರರು ಮಹಿಳಾ ತಂಡಕ್ಕೆ ಬೆಂಬಲ ನೀಡಿದ್ದರು.
ಇದನ್ನೂ ಓದಿ WPL 2023 : ಮುಂಬಯಿ ದಾಳಿಗೆ ಕುಸಿದ ಡೆಲ್ಲಿ ಕ್ಯಾಪಿಟಲ್ಸ್, 131 ರನ್ ಬಾರಿಸಿದ ಮೆಗ್ ಲ್ಯಾನಿಂಗ್ ಪಡೆ
ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಘಾತ ಎದುರಿಸಿತು. ಒಂದೇ ಓವರ್ನಲ್ಲಿ ಡೇಂಜರಸ್ ಬ್ಯಾಟರ್ಗಳಾದ ಶಫಾಲಿ ವರ್ಮ ಮತ್ತು ಅಲೀಸ್ ಕಾಪ್ಸಿ ವಿಕೆಟ್ ಕಿತ್ತು ಮಿಂಚಿದರು. ಶಫಾಲಿ ವರ್ಮಾ 4 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸರ್ ಸಮೇತ 11 ರನ್ ಬಾರಿಸಿ ಔಟಾದರು. ಅಲೀಸ್ ಕಾಪ್ಸಿ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೇ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಜೆಮಿಮಾ ರೋಡ್ರಿಗಸ್ (9) ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಇದರಿಂದಾಗಿ ದೊಡ್ಡ ಮೊತ್ತ ಪೇರಿಸುವ ಡೆಲ್ಲಿ ಆಸೆ ಭಗ್ನವಾಯಿತು.