ಮುಂಬಯಿ: ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ವನಿತೆಯರ ಪ್ರೀಮಿಯರ್ ಲೀಗ್ನ(WPL 2023) ಟೈಟಲ್ ಪ್ರಾಯೋಜಕತ್ವದ ಹಕ್ಕು ಟಾಟಾ ಸಮೂಹದ(Tata Group) ಪಾಲಾಗಿದೆ. ಈ ವಿಚಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.
“ಡಬ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು ಟಾಟಾ ಗ್ರೂಪ್ ವಹಿಸಿಕೊಂಡಿರುವುದು ಸಂತಸ ತಂದಿದೆ. ಅವರ ಬೆಂಬಲದೊಂದಿಗೆ ಮಹಿಳಾ ಕ್ರಿಕೆಟ್ ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು ಎಂಬ ವಿಶ್ವಾಸ ನಮಗಿದೆ” ಎಂದು ಜಯ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಟೈಟಲ್ ಪ್ರಾಯೋಜಕತ್ವದ ಹಕ್ಕನ್ನು ಮುಂದಿನ 5 ವರ್ಷಗಳ ಅವಧಿಗೆ ಟಾಟಾ ಗ್ರೂಪ್ ಪಡೆದುಕೊಂಡಿದೆ ಎನ್ನಲಾಗಿದೆ. ಆದರೆ ಇದು ಎಷ್ಟು ಮೊತ್ತದ ಒಡಂಬಡಿಕೆ ಎಂಬುದು ತಿಳಿದು ಬಂದಿಲ್ಲ. ಕಳೆದ ವರ್ಷವಷ್ಟೇ ಟಾಟಾ ಗ್ರೂಪ್ ಪುರುಷರ ಐಪಿಎಲ್ನ ಟೈಟಲ್ ಪ್ರಾಯೋಜಕತ್ವ ಪಡೆದಿತ್ತು. ಇದೀಗ ಮಹಿಳಾ ಕ್ರಿಕೆಟ್ನ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.
ಇದನ್ನೂ ಓದಿ WPL 2023: ಆರ್ಸಿಬಿ ತಂಡಕ್ಕೆ ಬೆನ್ ಸಾಯರ್ ಮುಖ್ಯ ಕೋಚ್
ಈಗಾಗಲೇ ಬಿಸಿಸಿಐ ಮಾಧ್ಯಮ ಹಕ್ಕು ಮಾರಾಟದಿಂದ 951 ಕೋಟಿ ರೂ. ಹಾಗೂ 5 ತಂಡಗಳ ಮಾರಾಟದಿಂದ 4,700 ಕೋಟಿ ರೂ. ಗಳಿಸಿದೆ. ಇದೀಗ ಟೈಟಲ್ ಪ್ರಾಯೋಜಕತ್ವದಿಂದಲೂ ದೊಡ್ಡ ಮೊತ್ತವನ್ನು ಪಡೆದಿರುವ ಸಾಧ್ಯತೆ ಇದೆ.