Site icon Vistara News

ಚೆನ್ನೈ ತಂಡದ ಕಟ್ಟರ್‌ ಅಭಿಮಾನಿಯನ್ನು ಖರೀದಿ ಮಾಡಿದ ಆರ್​ಸಿಬಿ ಫ್ರಾಂಚೈಸಿ

Kate Cross reveals ‘soft spot for RCB’ after bagging deal

ಬೆಂಗಳೂರು: ಮುಂದಿನ ವರ್ಷ ನಡೆಯುವ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024ರ ಆಟಗಾರ್ತಿಯರ ಹರಾಜು(WPL Auction 2024) ಪ್ರಕ್ರಿಯೆ ಈಗಾಗಲೇ ಮುಕ್ತಾಯ ಕಂಡಿದೆ. ಶನಿವಾರ (ಡಿ.9) ಮುಂಬೈಯಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು. ಎಲ್ಲ 5 ಫ್ರಾಂಚೈಸಿಗಳು ಕೂಡ ತಮಗೆ ಬೇಕಿದ್ದ ಆಟಗಾರ್ತಿಯನ್ನು ಹರಾಜಿನಲ್ಲಿ ಕೊಂಡುಕೊಂಡಿದೆ. ಆದರೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕಟ್ಟರ್‌ ಅಭಿಮಾನಿಯಾಗಿರುವ(CSK fan Kate Cross) ಇಂಗ್ಲೆಂಡ್ ಆಟಗಾರ್ತಿ ಕೇಟ್ ಕ್ರಾಸ್ (Kate Cross) ಅವರನ್ನು ಆರ್​ಸಿಬಿ ತಂಡ ಖರೀದಿ ಮಾಡಿದ್ದು ಆರ್​ಸಿಬಿ ಅಭಿಮಾನಿಗಳಿಗೆ ಬೇಸರ ತಂದಿದೆ.

ಮಿನಿ ಹರಾಜಿನಲ್ಲಿ ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ಆಗಿರುವ ಕೇಟ್​ ಕ್ರಾಸ್​ ಅವರನ್ನು ಆರ್​ಸಿಬಿ 30 ಲಕ್ಷ ರೂ. ಖರೀದಿ ಮಾಡಿದೆ. ಇದರ ಬೆನ್ನಲ್ಲೇ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಆರ್​ಸಿಬಿ ಸೇರಿದಕ್ಕೆ ಸಂತಸಗೊಂಡಿದ್ದೇನೆ. ಆದರೂ ನಾನು ಚೆನ್ನೈ ಸೂಪರ್ ಕಿಂಗ್ಸ್​ನ ಅಪ್ಪಟ್ಟ ಅಭಿಮಾನಿಯಾಗಿಯೇ ಮುಂದುವರಿಯುತ್ತೇನೆ ಎಂದು ಬರೆದಿದ್ದಾರೆ. ಇದು ಆರ್​ಸಿಬಿ ಅಭಿಮಾನಿಗಳಿಗೆ ಕೆರಳಿಸುವಂತೆ ಮಾಡಿದೆ.

​ಐಪಿಎಲ್​ನ ಬದ್ಧ ಎದುರಾಳಿ ತಂಡಗಳೆಂದರೆ ಅದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್ ಬೆಂಗಳೂರು. ಇತ್ತಂಡಗಳ ಪಂದ್ಯ ಬಂತೆಂದರೆ ಸಾಕು ಇಂಡೋ-ಪಾಕ್​ ಪಂದ್ಯದಂತೆ ಅಭಿಮಾನಿಗಳು ಈ ಪಂದ್ಯವನ್ನು ನೋಡಲು ಕಾತರಗೊಳ್ಳುತ್ತಾರೆ. ಅಲ್ಲದೆ ಪಂದ್ಯದ ಬಳಿಕ ಅಭಿಮಾನಿಗಳು ಹಲವು ಬಾರಿ ಹೊಡೆದಾಟ ಕೂಟ ನಡೆಸಿದ ಹಲವು ನಿದರ್ಶನಗಳಿಗೆ. ಹೀಗಿರುವಾಗ ಆರ್​ಸಿಬಿ ಸೇರಿಯೂ ಚೆನ್ನೈ ತಂಡದ ಅಭಿಮಾನಿ ಎಂದು ಕೇಟ್ ಕ್ರಾಸ್ ಹೇಳಿರುವುದು ಆರ್​ಸಿಬಿ ಫ್ಯಾನ್ಸ್​ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಬೆಂಚ್​​ ಕಾಯಿಸಿ ಎಂದ ನೆಟ್ಟಿಗರು

ಚೆನ್ನೈ ಅಭಿಮಾನಿಯಾಗಿರುವ ಕೇಟ್ ಕ್ರಾಸ್ ಅವರನ್ನು ಆಡುವ ಬಳಗದಲ್ಲಿ ಅವಕಾಶ ನೀಡದೆ ಅವರನ್ನು ಟೂರ್ನಿಯುದ್ದಕ್ಕೂ ಬೆಂಚ್​ ಕಾಯಿಸಿ ಎಂದು ನೆಟ್ಟಿಗರೊಬ್ಬರು ಆರ್​ಸಿಬಿ ಫ್ರಾಂಚೈಸಿಗೆ ಸಲಹೆ ನೀಡಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಆರ್​ಸಿಬಿ ಫ್ರಾಂಚೈಸಿ ಮೇಲೆಯ ಕಿಡಿಕಾರಿದ್ದಾರೆ. ಈ ಹಿಂದೆಯೇ ಕೇಟ್ ಕ್ರಾಸ್ ಅವರು ಚೆನ್ನೈ ಸೂಪರ್​ ಕಿಂಗ್ಸ್​ ಅಭಿಮಾನಿ ಎನ್ನುವುದನ್ನು ತಿಳಿದಿದ್ದರೂ ಕೂಡ ಅವರನ್ನು ಖರೀದಿ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಟ್ ಕ್ರಾಸ್ ಕಳದ ಕೆಲ ವರ್ಷಗಳಿಂದ ಐಪಿಎಲ್​ ಟೂರ್ನಿ ಆರಂಭವಾಗುವ ಸಂದರ್ಭದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಜರ್ಸಿ ಧರಿಸಿ ತಂಡಕ್ಕೆ ಬೆಂಬಲ ಸೂಚಿಸುತ್ತಲೇ ಬಂದಿದ್ದರು. ಇದರ ಫೋಟೊಗಳು ಕೂಡ ವೈರಲ್​ ಆಗಿತ್ತು.

ಇದನ್ನೂ ಓದಿ RCB WPL 2024: ಬಲಿಷ್ಠ ತಂಡ ಕಟ್ಟಿದ ಮಹಿಳಾ ಆರ್​ಸಿಬಿ; ಆಟಗಾರ್ತಿಯರ ಫುಲ್​ ಲೀಸ್ಟ್​ ಇಲ್ಲಿದೆ 

ಆರ್​ಸಿಬಿ ತಂಡ

ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಶ್ತ್, ಶುಭಾ ಸತೀಶ್, ಎಸ್ ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.

Exit mobile version