ಬೆಂಗಳೂರು: ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024ರ (WPL 2024) ಫೆ.23ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡಕ್ಕೆ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಹಾಗೂ ಅನುಭವಿ ಇಂಗ್ಲೆಂಡ್ ಆಟಗಾರ್ತಿ ಹೀದರ್ ನೈಟ್(Heather Knight) ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕಿಯಾಗಿರುವ ಹೀದರ್ ನೈಟ್ ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ದೇಶವನ್ನು ಪ್ರತಿನಿಧಿಸುವ ಸಲುವಾಗಿ ಡಬ್ಲ್ಯುಪಿಎಲ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಆರ್‌ಸಿಬಿ ಮತ್ತು ಡಬ್ಲ್ಯುಪಿಎಲ್ ಖಚಿತಪಡಿಸಿದೆ. ಆರ್‌ಸಿಬಿ ಹೀದರ್ ನೈಟ್ ಬದಲಿಗೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಡಿನ್ ಡಿ ಕ್ಲರ್ಕ್ ಅವರನ್ನು ಬದಲಿ ಆಟಗಾರ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಮಧ್ಯಮ ವೇಗದ ಬೌಲಿಂಗ್ ಮತ್ತು ಬಲಗೈ ಬ್ಯಾಟ್ ಮಾಡುವ ಡಿ ಕ್ಲರ್ಕ್ ದಕ್ಷಿಣ ಆಫ್ರಿಕಾ ಪರ 30 ಏಕದಿನ ಮತ್ತು 46 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
🚨 JUST IN: Heather Knight pulls out of WPL 2024 🚨
— Women’s CricZone (@WomensCricZone) January 27, 2024
England captain Heather Knight has decided to pull out of WPL 2024. RCB have named South Africa allrounder Nadine de Klerk as the replacement.#WPL2024 | #WPL pic.twitter.com/iRn3jkcScW
ನೈಟ್ ಜತೆಗೆ, ಆಲಿಸ್ ಕ್ಯಾಪ್ಸೆ (ದೆಹಲಿ ಕ್ಯಾಪಿಟಲ್ಸ್), ಇಸ್ಸಿ ವಾಂಗ್ ಮತ್ತು ನ್ಯಾಟ್ ಸ್ಕಿವರ್-ಬ್ರಂಟ್ (ಮುಂಬೈ ಇಂಡಿಯನ್ಸ್), ಕೇಟ್ ಕ್ರಾಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಸೋಫಿ ಎಕ್ಲೆಸ್ಟೋನ್ ಮತ್ತು ಡ್ಯಾನಿ ವ್ಯಾಟ್ (ಯುಪಿ ವಾರಿಯರ್ಜ್) ಕೂಡ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗೆ ಅಲಭ್ಯರಾಗುವ ಸಾಧ್ಯತೆ ಇದೆ. ಒಂದೊಮ್ಮೆ ಇವರು ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗದಿದ್ದರೆ ಡಬ್ಲ್ಯುಪಿಎಲ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ತಂಡವು ಕಳೆದ ಸೀಸನ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಬಾರಿ ಸ್ಟಾರ್ ಆಟಗಾರರ ಸೇರ್ಪಡೆಯೊಂದಿಗೆ ತಂಡ ಮತ್ತಷ್ಟು ಬಲಿಷ್ಠವಾಗಿದೆ.
ಇದನ್ನೂ ಓದಿ WPL 2024: ಲಾರೆನ್ ಬೆಲ್ ಬದಲಿಗೆ ಯುಪಿ ವಾರಿಯರ್ಸ್ ಸೇರಿದ ಚಾಮರಿ ಅಟಪಟ್ಟು
ಆರ್‌ಸಿಬಿ ಪರಿಷ್ಕೃತ ತಂಡ
ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವಾರೆಹಮ್, ಏಕ್ತಾ ಬಿಷ್ತ್, ಕೇಟ್ ಕ್ರಾಸ್, ಶುಭಾ ವಾರೇಹಮ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್.
ಎರಡನೇ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಫೆ.23ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಮಾರ್ಚ್ 17ರಂದು ಹೊಸದಿಲ್ಲಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಕಳೆದ ವರ್ಷ ಸಂಪೂರ್ಣವಾಗಿ ಮುಂಬೈನಲ್ಲಿ ಟೂರ್ನಿ ನಡೆದಿತ್ತ. ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿಯೂ ನಡೆಯಲಿದೆ. ಮೊದಲ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್ ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.