ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2024ರ(WPL 2024) ಮಿನಿ ಹರಾಜಿನಲ್ಲಿ 1.30 ಕೋಟಿಗೆ ಯು.ಪಿ ವಾರಿಯರ್ಸ್ ಪಾಲಾಗಿದ ಕರ್ನಾಟಕದ ಯುವ ಬ್ಯಾಟರ್ ವೃಂದಾ ದಿನೇಶ್(Vrinda Dinesh) ಅವರು ಭುಜದ ಗಾಯದಿಂದಾಗಿ ಸಂಪೂರ್ಣವಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ವೃಂದಾ ಭಜದ ಗಾಯಕ್ಕೆ ತುತ್ತಾಗಿದ್ದರು. ಅವರ ಗಾಯದ ಪ್ರಮಾಣ ಗಂಭೀರವಾಗಿರುವ ಕಾರಣದಿಂದಾಗಿ ಅವರು ಈ ಬಾರಿಯ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ವೃಂದಾ ದಿನೇಶ್ ಈ ಬಾರಿ ಮೂರು ಪಂದ್ಯಗಳನ್ನು ಆಡಿದ್ದರು. ಆರ್ಸಿಬಿ ವಿರುದ್ಧ ಆಡಿದ ಚೊಚ್ಚಲ ಪಂದ್ಯದಲ್ಲಿ 18 ರನ್ ಬಾರಿಸಿದ್ದ ಅವರು ಡೆಲ್ಲಿ ಎದುರಿನ ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಮುಂಬೈ ಎದುರಿನ ಮೂರನೇ ಪಂದ್ಯದಲ್ಲಿ ಗಾಯದಿಂದಾಗಿ ಬ್ಯಾಟಿಂಗ್ ನಡೆಸಿರಲಿಲ್ಲ.
ಬೆಂಗಳೂರಿನವರದಾದ ವೃಂದಾ ದಿನೇಸ್ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿ. ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕದ ತಂಡವು ಫೈನಲ್ ತಲುಪುವಲ್ಲಿ ವೃಂದಾ ಪ್ರಮುಖ ಪಾತ್ರ ವಹಿಸಿದ್ದರು. 11 ಇನ್ನಿಂಗ್ಸ್ ಗಳಲ್ಲಿ 47.70 ರ ಸರಾಸರಿಯಲ್ಲಿ 477 ರನ್ ಗಳಿಸಿದ್ದರು. ವೃಂದಾ ಇತ್ತೀಚೆಗಷ್ಟೇ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದರು. ಆರಂಭಿಕ ಹಂತದಲ್ಲಿ ಕನ್ನಡತಿ ವೃಂದಾ ದಿನೇಶ್ ಅವರು ಡಬ್ಲ್ಯುಪಿಎಲ್ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್ ಆದ ಅನ್ಕ್ಯಾಪ್ಡ್ ಪ್ಲಯರ್ ಎನ್ನುವ ಕೀರ್ತಿಗೆ ಪಾತ್ರವಾದರೂ ಈ ಸಂತಸ ಹಚ್ಚು ಕಾಲ ಉಳಿಯಲಿಲ್ಲ. ಕಶ್ವಿ ಗೌತಮ್ ಅವರು ಬರೋಬ್ಬರಿ 2 ಕೋಟಿ ರೂ. ಪಡೆದು ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು.
ಇದನ್ನೂ ಓದಿ WPL Points Table: ಯುಪಿಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಮುಂಬೈ
ಬಿಡ್ಡಿಂಗ್ ಬಳಿಕ ಮಾತನಾಡಿದ್ದ ವೃಂದಾ ದಿನೇಶ್, ‘ರಾಷ್ಟ್ರೀಯ ತಂಡದ ಪರ ಆಡದ ನನಗೆ ಇಷ್ಟೊಂದು ಬೇಡಿಕೆಯ ಮೊತ್ತ ಸಿಗಬಹುದೆಂದು ಕನಸಿನಲ್ಲಿಯೂ ಎನಿಸಿಕೊಂಡಿರಲಿಲ್ಲ. ಆದರೆ ನಾನು ಯಾವುದಾದರು ಒಂದು ತಂಡಕ್ಕೆ ಸೇಲ್ ಆಗಬಹುದೆಂದು ನಂಬಿಕೆ ಇತ್ತು. ನನಗೆ ಸಿಕ್ಕ ಈ ಮೊತ್ತದಲ್ಲಿ ನನ್ನ ಎಲ್ಲ ಏಳು- ಬೀಳಿನಲ್ಲಿ ಜತೆಗಿದ್ದ ನನ್ನ ತಂದೆ ಮತ್ತು ತಾಯಿಗೆ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ” ಎಂದು ಹೇಳಿದ್ದರು. ಆದರೆ ಅವರಿಗೆ ಈ ಬಾರಿ ಟೂರ್ನಿ ಆಡಲು ಗಾಯದ ಸಮಸ್ಯೆ ಅಡ್ಡಿಪಡಿಸಿದ್ದು ನಿಜಕ್ಕೂ ಬೇಸರದ ಸಂಗತಿ. ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದರೆ ಅವರಿಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶವೂ ಲಭಿಸುತ್ತಿತ್ತು.
ಯಪಿ ತಂಡ ಸತತ ಎರಡು ಗೆಲುವು ಸಾಧಿಸಿ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ 3ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ವೃಂದಾ ದಿನೇಶ್ ಅಲಭ್ಯತೆ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.