ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL) ಯಶಸ್ವಿಯಾಗಿ ನಡೆದ ಬಳಿಕ ಇದೀಗ ಮುಂದಿನ ಆವೃತ್ತಿಯಲ್ಲಿ ಕೆಲ ಬದಲಾವಣೆಯನ್ನು ಮಾಡಲು ಬಿಸಿಸಿಐ ಮುಂದಾಗಿದೆ. ಪಂದ್ಯಗಳನ್ನು ಪುರುಷರ ಐಪಿಎಲ್‌ನಂತೆ ತವರಿನ ಅಂಗಳ ಹಾಗೂ ಎದುರಾಳಿ ತಂಡದ ಅಂಗಳದಲ್ಲಿ ಆಡಿಸುವ ಯೋಜನೆಯನ್ನು ರೂಪುಗೊಳಿಸಲಾಗಿದೆ.
ಈ ವರ್ಷದ ಆರಂಭಿಕ ಆವೃತ್ತಿಯ ಪಂದ್ಯಾವಳಿ 5 ತಂಡಗಳ ನಡುವೆ ಮುಂಬಯಿಯ 2 ಸ್ಟೇಡಿಯಂಗಳಲ್ಲಷ್ಟೇ ನಡೆದಿತ್ತು. ಮುಂದಿನ 3 ಋತುಗಳ ಕಾಲ ವನಿತಾ ಪ್ರೀಮಿಯರ್ ಲೀಗ್ 5 ತಂಡಗಳಿಗಷ್ಟೇ ಸೀಮಿತವಾಗಲಿದೆ ಎಂದು ಇತ್ತೀಚೆಗಷ್ಟೇ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದರು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮುಂದಿನ ಬಾರಿ ಪಂದ್ಯಗಳನ್ನು ತಂಡಗಳ ತವರಿನಲ್ಲಿ ನಡೆಸು ಕುರಿತು ಹೇಳಿಕೆ ನೀಡಿದ್ದಾರೆ.
“ವರ್ಷದಲ್ಲಿ 2 ಆವೃತ್ತಿ ನಡೆಸುವ ಉದ್ದೇಶವಿಲ್ಲ. ಬಿಡುವಿನ ಸಮಯ ನೋಡಿಕೊಂಡು ಟೂರ್ನಿಯನ್ನು ಆಯೋಜಿಸಲಿದ್ದೇವೆ. ಡಬ್ಲ್ಯುಪಿಎಲ್ ಈಗ ತನ್ನದೇ ಆದ ಅಭಿಮಾನಿಗಳ ಬಳಗ ಹೊಂದಿದೆ. ಅಭಿಮಾನಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಜಯ್ ಶಾ ಹೇಳಿದರು.
ಇದನ್ನೂ ಓದಿ WPL 2023: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್‌ನ ಸಾಧಕರು ಇವರು
ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಮುಂಬೈ ಇಂಡಿಯನ್ಸ್
ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸತೊಂದು ಸಂಚಲನ ಮೂಡಿಸಿದ್ದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ವಿರುದ್ಧ ಗೆದ್ದು ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮುಂಬಯಿಯ ಬ್ರೆಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಮಣಿಗಳ ಈ ಪ್ರಶಸ್ತಿ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೀರಸ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 131 ರನ್ ಬಾರಿಸಿತ್ತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 19.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 134 ರನ್ ಬಾರಿಸಿ ಗೆಲುವಿನ ನಗೆ ಬೀರಿತ್ತು.