ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಕೋರಿ ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಶುಕ್ರವಾರ ನಾಗರಿಕರಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ.
ಪ್ರತಿಭಟನೆಗೆ ಕುಳಿತಿರುವ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರೊಂದಿಗೆ ಇರುವ ವೀಡಿಯೊವನ್ನು ಪೋಸ್ಟ್ ಮಾಡಿದ ಪೂನಿಯಾ, ನಾವು ನಮ್ಮ ದೇಶದ ಕೆಚ್ಚೆದೆಯಿಂದ ಹೋರಾಡಿದ್ದೇವೆ. ಇಂದು ನಾವು ನಿಮ್ಮ ಚಾಂಪಿಯನ್ ಗಳ ಸುರಕ್ಷತೆ ಮತ್ತು ಗೌರವಕ್ಕಾಗಿ ಹೋರಾಡುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬೆಂಬಲಿಸಿ ಎಂದು ಕೋರಿಕೊಂಡಿದ್ದಾರೆ.
ಗುರುವಾರ ದೆಹಲಿಯ ರೈತರು ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಬಂದಿದ್ದ ಜನರು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು. ಇದರೊಂದಿಗೆ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಏತನ್ಮಧ್ಯೆ, ಪೂನಿಯಾ ಅವರು ಬೆಂಬಲ ಕೋರಿದ್ದಾರೆ.
ಪೊಲೀಸ್ ಭದ್ರತೆ ಹೆಚ್ಚಳ
ಪ್ರತಿಭಟನಾ ಸ್ಥಳದಲ್ಲಿ ಡೆಲ್ಲಿ ಪೊಲೀಸರ ಭದ್ರತೆ ಹೆಚ್ಚಿದೆ. ಹೊರಗಿನ ವ್ಯಕ್ತಿಗಳು ಬರದಂತೆ ನೋಡಿಕೊಳ್ಳಲಾಗುತ್ತಿದೆ. ಬುಧವಾರ ರಾತ್ರಿ ಪೊಲೀಸರು ಮತ್ತು ಪ್ರತಿಭನಾ ನಿರತರ ನಡುವೆ ಜಟಾಪಟಿಯೂ ನಡೆದಿತ್ತು. ಗುರುವಾರ ಪ್ರತಿಭಟನೆ ಬಂದಿದ್ದವರು “ನಾರಿ ಶಕ್ತಿ ಜಿಂದಾಬಾದ್”, “ಫೈಲ್ವಾನ್ಏಕ್ತಾ ಜಿಂದಾಬಾದ್” ಮುಂತಾದ ಘೋಷಣೆಗಳನ್ನು ಕೂಗಿದ್ದರು. ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್ನಿಂದ ಬಂದ ರೈತರು “ಜೈ ಕಿಸಾನ್ ಜೈ ಜವಾನ್” ಮತ್ತು “ಕಿಸಾನ್ ಏಕ್ತಾ ಜಿಂದಾಬಾದ್” ಎಂದು ಘೋಷಣೆಗಳನ್ನು ಕೂಗಿದ್ದಾರೆ. ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ : Wrestlers Protest: ದೆಹಲಿ ಪೊಲೀಸ್ ವಿರುದ್ಧ ಕುಸ್ತಿಪಟುಗಳ ಆಕ್ರೋಶ; ಪದಕ ಹಿಂದಿರುಗಿಸುತ್ತೇವೆ ಎಂದ ವಿನೇಶ್ ಫೋಗಟ್
“ಬುಧವಾರ ರಾತ್ರಿ ನಮ್ಮ ಕುಸ್ತಿಪಟುಗಳೊಂದಿಗೆ ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ. ಭಾರತಕ್ಕಾಗಿ ಪದಕಗಳನ್ನು ಗೆದ್ದ ಈ ದೇಶದ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದ್ದು, ಅವರಿಗೆ ನಮ್ಮ ಬೆಂಬಲವಿದೆ. ಪೊಲೀಸರ ದೌರ್ಜನ್ಯ ದುರದೃಷ್ಟಕರ. ನ್ಯಾಯ ಸಿಗುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಅಮೃತಸರದಿಂದ ಬಂದ ರೈತರೊಬ್ಬರು ಮಾಧ್ಯಮದ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಬುಧವಾರ ರಾತ್ರಿ ಏನು ನಡೆಯಿತು?
ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ನವ ದೆಹಲಿಯ ಜಂತರ್ಮಂತರ್ನಲ್ಲಿ ಬುಧವಾರ ಮಧ್ಯರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಜಟಾಪಟಿ ನಡೆದಿತ್ತು.
ಆಪ್ ನಾಯಕ ಸೋಮ್ನಾಥ್ ಬಾರ್ತಿ ಅವರೊಂದಿಗೆ ಹಲವಾರು ಮಂದಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್ಮಂತರ್ಗೆ ಬಂದಿದ್ದಾರೆ. ಅವರು ಯಾವುದೇ ಅನುಮತಿ ತೆಗೆದುಕೊಂಡಿರಲಿಲ್ಲ. ಅವರನ್ನು ತಡೆಯಲು ಹೋದಾಗ ಪ್ರತಿಭಟನಾಕಾರರು ಪ್ರತಿರೋಧ ತೋರಿದ್ದಾರೆ ಎಂದು ಡೆಲ್ಲಿ ಪೊಲೀಸರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಮಾಧ್ಯಮ ಮುಂದೆ ಮಾತನಾಡಿ, ನಮ್ಮ ಮೇಳೆ ಡೆಲ್ಲಿ ಪೊಲೀಸರು ದೌರ್ಜನ್ಯ ಆರಂಭಿಸಿದ್ದಾರೆ. ನನಗೆ ದೇಶದ ಬೆಂಬಲ ಬೇಕು. ನಮ್ಮ ಜತೆಗೆ ಇರುವ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಾಳೆ ಎಲ್ಲರೂ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿ ಎಂದು ಕರೆಕೊಟ್ಟಿದ್ದಾರೆ. ರೈತರು ಹಾಗೂ ಮುಖಂಡರು ಜಂತರ್ಮಂತ್ನಲ್ಲಿ ಸೇರುವ ಮೂಲಕ ನಮಗೆ ಬೆಂಬಲ ಸೂಚಿಸಬೇಕು ಎಂದು ಇದೇ ವೇಳೆ ತಿಳಿಸಿದ್ದಾರೆ.