Site icon Vistara News

Wrestlers Protest | ಲೈಂಗಿಕ ಕಿರುಕುಳ ಪ್ರಕರಣ; ಕುಸ್ತಿಪಟುಗಳ ಹೋರಾಟ ಅಂತ್ಯ

Wrestlers Protest

ನವದೆಹಲಿ: ಲೈಂಗಿಕ ಕಿರುಕುಳ ಆರೋಪ(Wrestlers Protest) ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಧ್ಯಕ್ಷ ಬ್ರಿಜ್​ ಭೂಷಣ್ ಶರಣ್ ಸಿಂಗ್ ತಮ್ಮ ರಾಜೀನಾಮೆ ಸೇರಿದಂತೆ ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್​ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ತಮ್ಮ ಧರಣಿಯನ್ನು ಅಂತ್ಯಗೊಳಿಸಿದ್ದಾರೆ.

ವಿನೇಶ್ ಪೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಶುಕ್ರವಾರ ತಡ ರಾತ್ರಿ ನಡೆಸಿದ ಎರಡನೇ ಸುತ್ತಿನ ಮಾತುಕತೆ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ. ಮಾತುಕತೆ ವೇಳೆ ಅನುರಾಗ್​ ಠಾಕೂರ್​ ಹೋರಾಟಗಾರರ ದೂರುಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದು, ಜತೆಗೆ ದೂರುಗಳ ತನಿಖೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ 7 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ ಎಂದು ಅನುರಾಗ್​ ಠಾಕೂರ್ ಹೇಳಿದರು.

“ಕುಸ್ತಿಪಟುಗಳ ಆರೋಪದ ತನಿಖೆಗೆ ಈಗಾಗಲೇ ಸಮಿತಿಯನ್ನು ರಚಿಸಲಾಗಿದ್ದು ನಾಲ್ಕು ವಾರಗಳಲ್ಲಿ ತನಿಖೆ ಪೂರ್ಣಗೊಳಿಸಲಿದೆ. ಇದು ಹಣಕಾಸು ಅವ್ಯವಹಾರ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ಎಲ್ಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ. ತನಿಖೆ ಪೂರ್ಣಗೊಳ್ಳುವವರಗೆ ಬ್ರಿಜ್​ ಭೂಷಣ್ ಅವರು ಹುದ್ದೆಯಿಂದ ಹೊರಗಿದ್ದು, ತನಿಖೆಗೆ ಸಹಕರಿಸಲಿದ್ದಾರೆ” ಎಂದು ಅನುರಾಗ್​ ಠಾಕೂರ್​ ತಳಿಸಿದರು.

ತನಿಖಾ ಸಮಿತಿಯಲ್ಲಿ ಸಂಪೂರ್ಣ ನಂಬಿಕೆ

ಸಭೆಯ ಬಳಿಕ ಮಾತನಾಡಿದ ಬಜರಂಗ್ ಪೂನಿಯಾ, ಸಭೆಯ ಫಲಿತಾಂಶದಿಂದ ನಮಗೆ ತೃಪ್ತಿ ಇದೆ. ತನಿಖಾ ಸಮಿತಿಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ನಮ್ಮ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಹಾಕಿದ ಬೆದರಿಕೆಯಿಂದ ಸ್ವಲ್ಪ ಚಿಂತಿತರಾಗಿದ್ದರು. ಆದರೆ ಸಚಿವಾಲಯವು ನಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಭರವಸೆ ನೀಡಿದೆ. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಐಒಎ ಅಧ್ಯಕ್ಷೆ ಪಿ.ಟಿ ಉಷಾ ಮತ್ತು ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಅವರೊಂದಿಗೆ ಅಭಿನವ್ ಬಿಂದ್ರಾ ಮತ್ತು ಯೋಗೇಶ್ವರ್ ಮುಂತಾದವರು ಸೇರಿ ಐಒಎ ತುರ್ತು ಕಾರ್ಯಕಾರಿ ಮಂಡಳಿಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ತನಿಖೆಗೆ 7 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ಮೇರಿ ಕೋಮ್​, ಡೋಲಾ ಬ್ಯಾನರ್ಜಿ, ಅಲಕಾನಂದ ಅಶೋಕ್, ಯೋಗೇಶ್ವರ್ ದತ್, ಸಹದೇವ್ ಯಾದವ್ ಮತ್ತು ಇಬ್ಬರು ವಕೀಲರು ಆಯ್ಕೆಗೊಂಡಿದ್ದರು.

ಇದನ್ನೂ ಓದಿ | Wrestlers Protest | ಲೈಂಗಿಕ ಕಿರುಕುಳ ಪ್ರಕರಣ; 7 ಸದಸ್ಯರ ತನಿಖಾ ಸಮಿತಿ ರಚಿಸಿದ ಐಒಎ

Exit mobile version