ನವದೆಹಲಿ: ಭಾರತ ಕುಸ್ತಿ ಫೆಡರೇಶನ್ ವಿರುದ್ಧ ಹೋರಾಡುತ್ತಿರುವ(Wrestlers Protest) ಒಲಿಂಪಿಯನ್ ಕುಸ್ತಿಪಟುಗಳು ತಮ್ಮ ಬೇಡಿಕೆಗಳನ್ನು ಆಲಿಸುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷೆ ಪಿ.ಟಿ ಉಷಾ ಅವರಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ಗೆ ತೆರಳಿದ ಪ್ರತಿಭಟನಾಕಾರರು, ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿ ರಚಿಸುವಂತೆ ಒತ್ತಾಯಿಸಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಂದ ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಹಲವಾರು ಕಿರಿಯ ಸಹೋದ್ಯೋಗಿಗಳು ಮಾಹಿತಿ ನೀಡಿರುವುದಾಗಿ ಕುಸ್ತಿಪಟುಗಳು ಐಒಎ ಅಧ್ಯಕ್ಷೆ ಪಿ.ಟಿ ಉಷಾ ಅವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರಾದ ರವಿ ದಹಿಯಾ ಮತ್ತು ಬಜರಂಗ್ ಪುನಿಯಾ ರಿಯೊ ಗೇಮ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದಂತೆ ಐವರು ಕುಸ್ತಿಪಟುಗಳು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಪತ್ರದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಭಾರತ ಕುಸ್ತಿ ಫೆಡರೇಶನ್ ವಿಸರ್ಜಿಸಬೇಕು ಮತ್ತು ಅದರ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಕುಸ್ತಿಪಟುಗಳು ಬೇಡಿಕೆ ಇರಿಸಿದ್ದಾರೆ. ಜತೆಗೆ ರಾಷ್ಟ್ರೀಯ ಒಕ್ಕೂಟದ ವ್ಯವಹಾರಗಳನ್ನು ನಡೆಸಲು ಕುಸ್ತಿಪಟುಗಳೊಂದಿಗೆ ಸಮಾಲೋಚಿಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Wrestler Protes | ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; ಬ್ರಿಜ್ ಭೂಷಣ್