Site icon Vistara News

wrestlers protest: ಸಂಜಯ್​ ಸಿಂಗ್​ ಹೊರಗಿಟ್ಟರೆ ಎಲ್ಲ ಸಮಸ್ಯೆ ಬಗೆಹರಿಯಲಿದೆ; ಸಾಕ್ಷಿ ಮಲಿಕ್​

Bajrang Punia, Sakshi Malik and Vinesh Phogat

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ನೂತನ ಅಧ್ಯಕ್ಷ ಸಂಜಯ್ ಸಿಂಗ್​ ಅವರನ್ನು ಕುಸ್ತಿ ಒಕ್ಕೂಟದಿಂದ ದೂರ ಇಟ್ಟರೆ ನಮಗೆ ಯಾವುದೇ ಸಮಸ್ಯೆ ಇರದು ಎಂದು ಕುಸ್ತಿ ತಾರೆ ಸಾಕ್ಷಿ ಮಲಿಕ್ ಹೇಳಿದ್ದಾರೆ. ಇದೇ ವೇಳೆ ತಮ್ಮ ತಾಯಿಗೆ ಫೋನ್ ಕರೆಗಳ ಮೂಲಕ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.

ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಇದನ್ನು ವಿರೋಧಿಸಿ ಸಾಕ್ಷಿ ಮಲಿಕ್ ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಸುರಿಸುತ್ತಾ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದರು. ನೂತನ ಸಮಿತಿಯಲ್ಲಿ ಸಂಜಯ್​ ಸಿಂಗ್​ ಅವರನ್ನು ಹೊರಗಿಟ್ಟು ಉಳಿದ ಸದ್ಯಸರು ಮುಂದುವರಿದರೆ ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸಾಕ್ಷಿ ಅವರು ಹೇಳಿದ್ದಾರೆ.

“ಸಂಜಯ್ ಸಿಂಗ್ ಅವರನ್ನು ಹೊರತುಪಡಿಸಿ ಹೊಸ ಡಬ್ಲ್ಯುಎಫ್‌ಐನೊಂದಿಗೆ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಸಂಜಯ್ ಸಿಂಗ್ ಇಲ್ಲದೇ ಇರುವ ಕುಸ್ತಿ ಒಕ್ಕೂಟ ಆಡಳಿತಕ್ಕೆ ಬಂದರೆ ನಾವು ಅದನ್ನು ಸ್ವಾಗತಿಸುತ್ತೇವೆ. ಮತ್ತು ದೇಶಕ್ಕಾಗಿ ಮತ್ತೆ ಕುಸ್ತಿ ಆಡಲು ಸಿದ್ಧರಿದ್ದೇವೆ. ಸರಕಾರ ನೇಮಿಸಿರುವ ತಾತ್ಕಾಲಿಕ ಸಮಿತಿಯೊಂದಿಗೂ ನಮ್ಮ ಯಾವುದೇ ತಕರಾರಿಲ್ಲ” ಎಂದು ಮಲಿಕ್ ಹೇಳಿದರು.

ತಾಯಿಗೆ ಬೆದರಿಕೆ ಕರೆ ಬರುತ್ತಿದೆ

ಸಂಜಯ್​ ಸಿಂಗ್​ ವಿರುದ್ಧ ಹೋರಾಟ ಆರಂಭಿಸಿದ ಕಾರಣದಿಂದ ಬ್ರಿಜ್ ಭೂಷಣ್ ಶರಣ್​ ಸಿಂಗ್ ಬೆಂಬಲಿಗರು ನನ್ನ ತಾಯಿಗೆ ಫೋನ್ ಕರೆಗಳ ಮೂಲಕ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ನಿಮ್ಮ ಕುಟುಂಬದ ಸದಸ್ಯರ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ನಮ್ಮನ್ನು ನಿಂದಿಸುತ್ತಿದ್ದಾರೆ. ನಿಂದಿಸುವವರು ತಮ್ಮ ಮನೆಯಲ್ಲೂ ಸಹೋದರಿಯರು ಹಾಗೂ ಹೆಣ್ಣು ಮಕ್ಕಳಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು” ಎಂದು ಸಾಕ್ಷಿ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಜೂನಿಯರ್‌ ಕುಸ್ತಿಪಟುಗಳಿಂದ ಪ್ರತಿಭಟನೆ

ಕುಸ್ತಿಪಟುಗಳಾದ ಬಜರಂಗ್‌ ಪೂನಿಯ, ಸಾಕ್ಷಿ ಮಲಿಕ್‌ ಮತ್ತು ವಿನೇಶ್‌ ಪೊಗಟ್‌ ವಿರುದ್ಧ ಯುವ ಕುಸ್ತಿಪಟುಗಳು ತಿರುಗಿ ಬಿದ್ದಿದ್ದು, ತಮ್ಮ ಕ್ರೀಡಾ ಬಾಳ್ವೆಯ ಮಹತ್ವದ ಒಂದು ವರ್ಷದ ನಷ್ಟದ ಸ್ಥಿತಿಗೆ ಈ ಮೂವರು ಪ್ರಮುಖ ಕಾರಣ ಎಂದು ಆರೋಪಿಸಿ ನೂರಾರು ಜೂನಿಯರ್‌ ಕುಸ್ತಿಪಟುಗಳು ಬುಧವಾರ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ Suryakumar Yadav : ಐಸಿಸಿ ವರ್ಷದ ಟಿ20 ತಂಡ ಸ್ಪರ್ಧೆಯಲ್ಲಿ ಭಾರತದ ಸ್ಫೋಟಕ ಬ್ಯಾಟರ್​ಗೆ ಅಗ್ರಸ್ಥಾನ

ಉತ್ತರ ಪ್ರದೇಶ, ಹರಿಯಾಣ ಮತ್ತು ದಿಲ್ಲಿಯ ವಿವಿಧ ಕಡೆಗಳಿಂದ ಬಸ್‌ಗಳಲ್ಲಿ ಆಗಮಿಸಿದ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲಿ ಸೇರಿ ಅಗ್ರಮಾನ್ಯ ಕುಸ್ತಿಪಟುಗಳ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ವರ್ಷದ ನಷ್ಟಕ್ಕೆ ಬಜರಂಗ್‌, ಸಾಕ್ಷಿ, ವಿನೇಶ್‌ ಕಾರಣರು ಎಂದು ಹೇಳುವ ಪೋಸ್ಟರ್‌ಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದರು. ಅನಿರೀಕ್ಷಿತ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ವರ್ಷದ ಹಿಂದೆ ಇದೇ ಸಮಯದಲ್ಲಿ ಮತ್ತು ಇದೇ ಸ್ಥಳದಲ್ಲಿ ಬಜರಂಗ್‌ ಪೂನಿಯ, ಸಾಕ್ಷಿ ಮತ್ತು ವಿನೇಶ್‌ ಪೊಗಟ್‌ ಅವರು ಅಂದಿನ ಅಧ್ಯಕ್ಷ ಬ್ರಿಜ್​ ಭೂಷಣ್‌ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಅಂದು ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳ ವಿರುದ್ಧವೇ ಯುವ ಕುಸ್ತಿಪಟುಗಳು ತಿರುಗಿಬಿದ್ದಿದ್ದಾರೆ.

Exit mobile version