ನವದೆಹಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಸಮಸ್ಯೆಯನ್ನು ಕೇಂದ್ರವು ಸೂಕ್ಷ್ಮವಾಗಿ ನಿಭಾಯಿಸುತ್ತಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಸ್ತಿಪಟುಗಳ ಆರೋಪದ ಬಗ್ಗೆ ತನಿಖೆ ನಡೆಸಲು ಸಮಿತಿಯ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಂಗೀತಾ ಫೋಗಟ್ ಸೇರಿದಂತೆ ಹಲವು ಪದಕ ವಿಜೇತ ಕುಸ್ತಿಪಟುಗಳು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಈ ವೇಳೆ ಸಂಸತ್ ಭವನಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಈ ಕುಸ್ತಿಪಟುಗಳನ್ನು ಪೊಲೀಸರು ತಡೆದು ಅವರನ್ನು ಅತ್ಯಂತ ಅಮಾನುಷವಾಗಿ ರಸೆಯಲ್ಲಿ ಎಳೆದಾಡಿ ಬಂಧಿಸಿದ್ದರು. ಈ ಘಟನೆ ಬಳಿಕ ಕೇಂದ್ರ ಸರ್ಕಾರದ ಬಗ್ಗೆ ಹಲವು ಟೀಕೆಗಳು ಬಂದಿದ್ದವು.
ಇದೇ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುರಾಗ್ ಠಾಕೂರ್ ಆರೋಪಗಳ ತನಿಖೆ ಪೂರ್ಣಗೊಂಡ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕುಸ್ತಿಪಟುಗಳು ತಾಳ್ಮೆಯಿಂದಿರಬೇಕು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಂಬಿಕೆ ಇಡಬೇಕು ಎಂದು ಹೇಳಿದರು.
ಮನೆಗೆ ತೆರಳಿದ ಕುಸ್ತಿಪಟುಗಳು
ಸಾಕ್ಷಿ ಮಲಿಕ್ ಹೊರತುಪಡಿಸಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಹರಿಯಾಣದ ತಮ್ಮ ಮನೆಗಳಿಗೆ ಮರಳಿದ್ದಾರೆ ಮತ್ತು ಮೌನ ಪ್ರತಿಜ್ಞೆಯಿಂದಾಗಿ ಹರಿದ್ವಾರದಲ್ಲಿ ಕಾಯುತ್ತಿದ್ದ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ ಎಂದು ಪ್ರತಿಭಟನಾ ಗುಂಪಿನ ಸದಸ್ಯರೊಬ್ಬರು ಬುಧವಾರ ತಿಳಿಸಿದ್ದರು.
ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ಬಂಧನ ಸಾಧ್ಯವಿಲ್ಲ; ಪೊಲೀಸರು ಹೀಗೆ ಹೇಳಲು ಕಾರಣವೇನು?
ಭಾನುವಾರ ನೂತತ ಸಂಸತ್ ಭವನದ ಉದ್ಘಾಟನಾ ದಿನದಂದು ಪೊಲೀಸರು ವಶಕ್ಕೆ ಪಡೆದ ನಂತರ, ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದ್ದಾರೆ. ಕುಸ್ತಿಪಟುಗಳನ್ನು ಜಂತರ್ ಮಂತರ್‌ಗೆ ಹಿಂತಿರುಗಿಸಲು ಅನುಮತಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸದ್ಯ ಎಲ್ಲ ಕುಸ್ತಿಪಟುಗಳು ತಮ್ಮ ತಮ್ಮ ಮನೆಗೆ ಮರಳಿದ್ದಾರೆ ಆದರೆ ಸಾಕ್ಷಿ ಮಾತ್ರ ಇನ್ನೂ ದೆಹಲಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.