Site icon Vistara News

Wrestlers Protest: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಕ್ರಿಕೆಟಿಗ ಅನಿಲ್‌ ಕುಂಬ್ಳೆ

former Indian cricket captain Anil Kumble

ಬೆಂಗಳೂರು: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನು ಭಾನುವಾರ ಅತ್ಯಂತ ಅಮಾನುಷವಾಗಿ ಬಂಧಿಸಿದ ಪೊಲೀಸರ ಕ್ರಮಕ್ಕೆ, ಟೀಮ್​ ಇಂಡಿಯಾದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದಾರೆ.

ಘಟನೆ ಬಗ್ಗೆ ಟ್ವೀಟ್​ ಮಾಡಿರುವ ಕುಂಬ್ಳೆ ಅವರು, “ಮೇ 28ರಂದು ನಮ್ಮ ಕುಸ್ತಿಪಟುಗಳ ಮೇಲೆ ಪೊಲೀಸರು ತೋರಿದ ವರ್ತನೆಯನ್ನು ಕಂಡು ತುಂಬಾ ದುಃಖವಾಗಿದೆ. ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ಶೀಘ್ರ ಪರಿಹಾರಕ್ಕಾಗಿ ಆಶಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಇದೇ ವೇಳೆ ಸಂಸತ್​ ಭವನಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಈ ಕುಸ್ತಿಪಟುಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ನೂಕು ನುಗ್ಗಲು ಉಂಟಾಯಿತು. ವಿನೇಶ್ ಫೋಗಟ್ ಮತ್ತು ಅವರ ಸೋದರಿ​ ಸಂಗೀತಾ ಫೋಗಟ್​​ ಒಬ್ಬರ ಮೇಲೊಬ್ಬರು ಬಿದ್ದರು. ಆದರೂ ಅವರನ್ನು ಅತ್ಯಂತ ಅಮಾನುಷವಾಗಿ ರಸೆಯಲ್ಲಿ ಎಳೆದಾಡಿ ಬಂಧಿಸಲಾಗಿತ್ತು.

ಇದನ್ನೂ ಓದಿ Wrestlers Protest: ದೇಶಕ್ಕಾಗಿ ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲಿರುವ ಕುಸ್ತಿಪಟುಗಳು

ಈ ಘಟನೆ ಬಳಿಕ ದೇಶದ ಅಗ್ರಮಾನ್ಯ ಕ್ರೀಡಾಪಟುಗಳು ಸೇರಿ ವಿದೇಶಿ ಕ್ರೀಡಾಪಟುಗಳು ಕೂಡ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಟೋಕೊಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ, ಫುಟ್ಬಾಲ್​ ತಂಡದ ನಾಯಕ ಸುನೀಲ್​ ಚೇಟ್ರಿ, ಕ್ರಿಕೆಟಿಗ ಇರ್ಫಾನ್​ ಪಠಾಣ್​ ಹೀಗೆ ಹಲವರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

Exit mobile version