ನವದೆಹಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರ ಬಂಧನಕ್ಕೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳ(Wrestlers Protest) ವಿರುದ್ಧ ದಾಖಲಿಸಿರುವ ಎಫ್ಐಆರ್ ಹಿಂಪಡೆಯಲು ದೆಹಲಿ ಪೊಲೀಸರು(Delhi Police) ನಿರ್ಧರಿಸಿದ್ದಾರೆ. ಈ ವಿಚಾರವನ್ನು ಖಚಿತಪಡಿಸಿರುವ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಶೀಘ್ರದಲ್ಲೇ ಪೊಲೀಸರು ನ್ಯಾಯಾಲಯಕ್ಕೆ ಎಫ್ಐಆರ್ ರದ್ದು ವರದಿಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಗುರುವಾರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿಯ ಪೊಲೀಸರು 500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರ ವಿರುದ್ಧ ದಾಖಲಿಸಲಾಗಿದ್ದ ಮೊಕದ್ದಮೆಗಳನ್ನು ಶೀಘ್ರದಲ್ಲೇ ಪೊಲೀಸರು ನ್ಯಾಯಾಲಯಕ್ಕೆ ರದ್ದು ಕೋರಿ ವರದಿ ಸಲ್ಲಿಸಲಿದ್ದಾರೆ, ಇದಕ್ಕಾಗಿ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಟಿಯಾಲ ಕೋಟ್ಗೆ ವರದಿ ಸಲ್ಲಿಸಿರುವ ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿ ಸಲ್ಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ಮತ್ತು ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ವಿರುದ್ಧ ಇಂದು ಚಾರ್ಜ್ಶೀಟ್ ಸಲ್ಲಿಕೆ
ಮಾತು ಉಳಿಸಿಕೊಂಡ ಅನುರಾಗ್
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್(anurag thakur) ಅವರು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಅವರನ್ನು ಕಳೆದ ವಾರ ಭೇಟಿಯಾಗಿ ಜೂನ್ 15 ರೊಳಗೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಈ ಭರವಸೆಯ ನಂತರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ಅನುರಾಗ್ ಅವರು ಮಾತುಕೊಟ್ಟಂತೆ ಬ್ರಿಜ್ ಭೂಷಣ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.