ನವದೆಹಲಿ: ಐದು ದಿನಗಳ ಒಳಗಡೆ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಿಜೆಪಿ ಸಂಸದ, ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನವಾಗದಿದ್ದರೆ, ಜೂನ್ 5 ರಿಂದ ದೆಹಲಿ ಹಾಗೂ ಇದರ ವ್ಯಾಪ್ತಿಗೆ ಬರುವ ಹಲವು ಪ್ರದೇಶಗಳಿಗೆ ಹಾಲು ಹಾಗೂ ತರಕಾರಿ ಪೂರೈಕೆ ಸ್ಥಗಿತಗೊಳಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಟಿಕಾಯತ್, ಜೂನ್ 5ರ ಒಳಗಡೆ ಬ್ರಿಜ್ ಭೂಷಣ್ ಅವರ ಬಂಧಿಸಿ ಕುಸ್ತಿಪಟುಗಳಿಗೆ ಸೂಕ್ತ ನ್ಯಾಯ ಒದಗಿಸದಿದ್ದಲ್ಲಿ ದೆಹಲಿ ಸೇರಿ ಇದರ ಗಡಿ ಭಾಗಕ್ಕೂ ಹಾಲು ಮತ್ತು ತರಕಾರಿ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಜೂನ್ 5 ರಂದು ದೆಹಲಿ ಗಡಿ ಘೇರಾವ್ ಹೋರಾಟ ಆರಂಭಿಸುವುದಾಗಿಯೂ ತಿಳಿಸಿದ್ದಾರೆ.
ಮಂಗಳವಾರದಂದು ಕುಸ್ತಿಪಟುಗಳು ತಾವು ದೇಶಕ್ಕಾಗಿ ಗೆದ್ದ ಪದಕಗಳನ್ನು ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜಿಸಲು ಮುಂದಾಗಿದ್ದರು. ಆದರೆ ಇದು ದೇಶದ ಘನತೆಗೆ ಅಗೌರವ ತೋರಿದಂತಾಗುತ್ತದೆ ಎಂದು ಮನವೊಲಿಸಿ ಅವರನ್ನು ತಡೆಯಲಾಗಿದೆ. ಜತೆಗೆ ಕೇಂದ್ರಕ್ಕೆ ಒಂದು ಅವಕಾಶವನ್ನು ನಿಡುವ ಮೂಲಕ 5 ದಿನಗಳ ಗಡುವು ನೀಡಿದ್ದೇವೆ. ಒಂದೊಮ್ಮೆ ಇದ್ದಕ್ಕೂ ಸರಿಯಾದ ಸ್ಪಂದನೆ ಸಿಗದೇ ಹೋದರೆ ಹರಿದ್ವಾರಕ್ಕೆ ತೆರಳಿ ಪದಕಗಳನ್ನು ವಿರ್ಸರ್ಜಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗುವಂತೆ ಮಾಡಲಾಗುವುದು ಎಂದು ಟೀಕಾಯತ್ ಹೇಳಿದ್ದಾರೆ.
ಇದನ್ನೂ ಓದಿ Wrestlers Protest: ಕುಸ್ತಿ ಫೆಡರೇಷನ್ಗೆ ಎಚ್ಚರಿಕೆ ನೀಡಿದ ವಿಶ್ವ ಒಕ್ಕೂಟ
ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ದೇಶಕ್ಕಾಗಿ ಪದಕ ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದ ಕುಸ್ತಿಪಟುಗಳನ್ನು ರಸ್ತೆಯಲ್ಲಿ ಎಳೆದಾಡಿ ಬಂಧಿಸಿದರೂ, ಈ ಬಗ್ಗೆ ಪ್ರಧಾನಿ ಮೋದಿ ಸೇರಿ ಕೇಂದ್ರದ ಯಾವುದೇ ಬಿಜೆಪಿ ಸದಸ್ಯರು ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ. ಇವರೆಲ್ಲ ಸೇರಿಕೊಂಡು ಬ್ರಿಜ್ ಭೂಷಣ್ ಸಿಂಗ್ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಬಿಸಿ ಮುಟ್ಟಿಸಲು ನಾವು ಎಲ್ಲ ಸಿದ್ಧತೆ ನಡೆಸಿದ್ದೇವೆ ಎಂದು ಅವರು ಹೇಳಿದರು.