Site icon Vistara News

Wrestlers Protest: ದೆಹಲಿ ಪೊಲೀಸ್​ ವಿರುದ್ಧ ಕುಸ್ತಿಪಟುಗಳ ಆಕ್ರೋಶ; ಪದಕ ಹಿಂದಿರುಗಿಸುತ್ತೇವೆ ಎಂದ ವಿನೇಶ್ ಫೋಗಟ್​

vinesh phogat talking to press about returning medals on wrestlers protest

#image_title

ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್ (Brij Bhushan Singh) ವಿರುದ್ಧ ಕುಸ್ತಿಪಟುಗಳು ದೆಹಲಿಯ ಜಂತರ್​ಮಂತರ್​ನಲ್ಲಿ ನಡೆಸುತ್ತಿರುವ ಪ್ರತಿಭಟನೆ (Wrestlers Protest) ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಬುಧವಾರ ರಾತ್ರಿ ದೆಹಲಿ ಪೊಲೀಸರು ನಮ್ಮನ್ನು ನಿಂದಿಸಿ, ತಳ್ಳಿದ್ದಾರೆ ಎಂದು ಆರೋಪಿಸಿರುವ ಕುಸ್ತಿಪಟು ವಿನೇಶ್ ಫೋಗಟ್​ ತಾವು ಗೆದ್ದ ಪದಕಗಳನ್ನು ಹಿಂತಿರುಗಿಸುವುದಾಗಿ ಹೇಳಿದ್ದಾರೆ.

ದೆಹಲಿ ಪೊಲೀಸ್​ ಸಿಬ್ಬಂದಿ ಕೆಲವರು ಮದ್ಯಪಾನ ಮಾಡಿ, ಅಮಲಿನಲ್ಲಿ ಪ್ರತಿಭಟನಾಕಾರರನ್ನು ತಳ್ಳಿದ್ದಾರೆ ಎಂದು ಕುಸ್ತಿಪಟುಗಳು ಆರೋಪ ಮಾಡಿದ್ದಾರೆ. ಇನ್ನು ದೆಹಲಿ ಪೊಲೀಸರು ಇದಕ್ಕೆ ಪ್ರತಿಯಾಗಿ ಕುಸ್ತಿಪಟುಗಳ ವಿರುದ್ಧವೇ ಆರೋಪ ಮಾಡಿದ್ದಾರೆ. ಆಪ್​ ನಾಯಕ ಸೋಮನಾಥ್ ಭಾರ್ತಿ ನೇತೃತ್ವದಲ್ಲಿ ಪ್ರತಿಭಟನಾಕಾರರು ತಮ್ಮ ಹಾಸಿಗೆಗಳನ್ನೆಲ್ಲ ಮಡಿಸಿಕೊಂಡು ಹೊರಟರು. ನಮ್ಮ ಬಳಿ ಅನುಮತಿ ಪಡೆಯದೆ, ಹೋಗಿ ಬ್ಯಾರಿಕೇಡ್​ಗಳನ್ನೆಲ್ಲ ಮುರಿಯಲು ಯತ್ನಿಸಿದರು. ಹೀಗಾಗಿ ಅವರನ್ನು ತಡೆದಿದ್ದಷ್ಟೇ ಎಂದಿದ್ದಾರೆ.

ಈ ಬಗ್ಗೆ ಕುಸ್ತಿಪಟು ವಿನೇಶ್ ಫೋಗಟ್​ ಅವರು ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಹಾಕಿದ್ದಾರೆ. ದೆಹಲಿ ಪೊಲೀಸರು ನಮ್ಮನ್ನು ತುಂಬ ಕಠಿಣವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ‘ಮಳೆಯಿಂದಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದ ಪ್ರದೇಶದಲ್ಲೆಲ್ಲ ನೀರು ತುಂಬಿತ್ತು. ಹೀಗಾಗಿ ನಾವು ಮಂಚಗಳನ್ನು ತರಲು ನಿರ್ಧರಿಸಿದೆವು. ಮಂಚಗಳನ್ನು ತರುವ ವೇಳೆ ಧರ್ಮೇಂದ್ರ ಎಂಬ ಪೊಲೀಸ್​ ಅಧಿಕಾರಿ ನಮ್ಮನ್ನು ತಳ್ಳಿದ್ದಾರೆ. ಅಲ್ಲಿ ಮಹಿಳಾ ಪೊಲೀಸರು ಯಾರೂ ಇರಲಿಲ್ಲ’ ಎಂದು ವಿನೇಶ್ ಫೋಗಟ್​ ತಿಳಿಸಿದ್ದಾರೆ. ಅಷ್ಟೇ ಅಲ್ಲ ‘ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಸಿಂಗ್ ಅವರು ಮನೆಯಲ್ಲಿ ನೆಮ್ಮದಿಯಿಂದ ಮಲಗಿದ್ದಾರೆ. ನಾವಿಲ್ಲಿ ನಮ್ಮ ಗೌರವಕ್ಕಾಗಿ ಹೋರಾಡುತ್ತಿದ್ದೇವೆ. ಈ ಸನ್ನಿವೇಶಗಳನ್ನು ನೋಡಲೆಂದು ನಾವು ಪದಕಗಳನ್ನು ಗೆದ್ದಿದ್ದಾ?’ ಎಂದು ಹೇಳುತ್ತ ವಿನೇಶ್​ ಅತ್ತಿದ್ದಾರೆ.

ಇದನ್ನೂ ಓದಿ: Wrestlers Protest : ನಮ್ಮ ಮನ್​ಕಿ ಬಾತ್​ ಆಲಿಸಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ ಕುಸ್ತಿಪಟುಗಳು

‘ನಾವು ಸರ್ಕಾರದಿಂದ ಪಡೆದ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಎಲ್ಲ ಪದಕಗಳನ್ನೂ ಹಿಂದಿರುಗಿಸುತ್ತೇವೆ. ನಮ್ಮನ್ನು ನೆಲಕ್ಕೆ ಹಾಕಿ ಎಳೆದು, ಅವಮಾನಿಸಲಾಗುತ್ತಿದೆ. ಎಷ್ಟರ ಮಟ್ಟಿಗಿನ ಅವಮಾನ, ಅಮಾನವೀಯತೆಯನ್ನು ನಾವು ಸಹಿಸಿಕೊಳ್ಳಲು ಸಾಧ್ಯ’? ಎನ್ನುತ್ತ ವಿನೇಶ್ ಫೋಗಟ್ ಕಣ್ಣೀರು ಹಾಕಿದ್ದಾರೆ. ದೆಹಲಿ ಪೊಲೀಸರು ಪ್ರತಿಭಟನಾಕಾರರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಆ ಸ್ಥಳದಲ್ಲಿ ಹಾಕಲಾಗಿರುವ ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲನೆ ಮಾಡಲಾಗುವುದು. ಯಾವೆಲ್ಲ ವಿರುದ್ಧ ಪೊಲೀಸರ ವಿರುದ್ಧ ಆರೋಪ ಮಾಡಿದ್ದರೋ, ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version