ನವದೆಹಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಂಧನಕ್ಕೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ಒಲಿಂಪಿಕ್ಸ್ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರನ್ನು ಭಾನುವಾರ ಅತ್ಯಂತ ಅಮಾನುಷವಾಗಿ ಬಂಧಿಸಿದ ಕ್ರಮಕ್ಕೆ, ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ನೀರಜ್ ಮಾತ್ರವಲ್ಲದೆ ಇನ್ನೂ ಹಲವು ದೇಶದ ಅಗ್ರಮಾನ್ಯ ಕ್ರೀಡಾಪಟುಗಳು ಈ ವರ್ತನೆಗೆ ಆಕ್ರೋಶ ಹೊರಹಾಕಿದ್ದು ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಇದೇ ವೇಳೆ ಸಂಸತ್ ಭವನಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಈ ಕುಸ್ತಿಪಟುಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ನೂಕು ನುಗ್ಗಲು ಉಂಟಾಯಿತು. ವಿನೇಶ್ ಫೋಗಟ್ ಮತ್ತು ಅವರ ಸೋದರಿ ಸಂಗೀತಾ ಫೋಗಟ್ ಒಬ್ಬರ ಮೇಲೊಬ್ಬರು ಬಿದ್ದರು. ಆದರೂ ಅವರನ್ನು ಅತ್ಯಂತ ಅಮಾನುಷವಾಗಿ ಬಂಧಿಸುವ ಮೂಲಕ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಈ ಘಟನೆಗೆ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಒಂದನ್ನು ಮಾಡಿರುವ ಅವರು “ಈ ವಿಡಿಯೊ ಕಂಡ ಬಳಿಕ ನನಗೆ ದುಃಖವಾಗಿದೆ. ತಪ್ಪು ಮಾಡಿದ್ದಾರೆ ಎಂಬ ಕಾರಣಕ್ಕೆ ಈ ರೀತಿಯ ವರ್ತನೆ ತೋರಿರುವುದು ನಿಜಕ್ಕೂ ಬೇಸರ ತಂದಿದೆ. ಇದು ಉತ್ತಮ ಮಾರ್ಗವಲ್ಲ” ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದಿಯೂ ನೀರಜ್ ಚೋಪ್ರಾ ಅವರು ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್ ಕವಾಯ್
यह देखकर मुझे बहुत दुख हो रहा है | There has to be a better way to deal with this. https://t.co/M2gzso4qjX
— Neeraj Chopra (@Neeraj_chopra1) May 28, 2023
ಇದನ್ನೂ ಓದಿ Wrestlers Protest: ಬ್ರಿಜ್‌ಭೂಷಣ್ ಸಿಂಗ್ ಬಂಧಿಸಿ, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಿ: ಸಿದ್ದರಾಮಯ್ಯ ಆಗ್ರಹ
ನೀರಜ್ ಮಾತ್ರವಲ್ಲದೆ ಭಾರತದ ಸ್ಟಾರ್ ಫುಟ್ಬಾಲ್ ಆಟಗಾರ ಸುನೀಲ್ ಚೇಟ್ರಿ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. “ಯಾವುದೇ ತಪ್ಪನ್ನು ಮಾಡದೇ ದೇಶಕ್ಕಾಗಿ ಪದಕ ಗೆದ್ದ ನಮ್ಮ ಕುಸ್ತಿಪಟುಗಳ ಕೊರಳಪಟ್ಟಿ ಹಿಡಿದು ಏಕೆ ಎಳೆದಾಡಬೇಕು? ಈ ರೀತಿ ಯಾರನ್ನೂ ನಡೆಸಿಕೊಳ್ಳಬಾರದು. ಸೂಕ್ತ ಮಾರ್ಗದಲ್ಲಿ ಈ ಪರಿಸ್ಥಿತಿಯನ್ನು ಬಗೆಹರಿಸಬೇಕು” ಎಂದು ಹೇಳಿದ್ದಾರೆ. ಹೀಗೆ ಹಲವು ಕ್ರೀಡಾ ಪಟುಗಳು ಈ ಘಟನೆಯನ್ನು ಖಂಡಿಸಿದ್ದಾರೆ.