Site icon Vistara News

Wrestlers Protest: ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟವಿಲ್ಲ; ಸಾಕ್ಷಿ ಮಲಿಕ್​

sakshi malik and satyawart kadian

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ವಿರುದ್ಧ ಮಾತ್ರ ತಮ್ಮ ಹೋರಾಟ, ಕೇಂದ್ರ ಸರ್ಕಾರದ ವಿರುದ್ಧ ಅಲ್ಲ ಎಂದು ಸಾಕ್ಷಿ ಮಲಿಕ್(sakshi malik)​ ಹೇಳಿದ್ದಾರೆ. ಟ್ವಿಟರ್​ನಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಸಾಕ್ಷಿ ಮತ್ತು ಅವರ ಪತಿ ಸತ್ಯವರ್ತ್ ಕಡಿಯನ್ ಸ್ಪಷ್ಟ ಪಡಿಸಿದ್ದಾರೆ.

ಪ್ರತಿಭಟನೆಯಿಂದ ತಾತ್ಕಾಲಿಕವಾಗಿ ಹಿಂದೆ ಸರಿದು ಮತ್ತೆ ಕೆಲಸಕ್ಕೆ ಹಾಜರಾಗಿರುವ ಕುಸ್ತಿಪಟುಗಳ(Wrestlers Protest) ವಿರುದ್ಧ ಹಲವು ವದಂತಿಗಳು ಹರಿದಾಟುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಾಕ್ಷಿ ಮಲಿಕ್​, ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂಬ ಕಾರಣಕ್ಕೆ ನಾವು ಬ್ರಿಜ್​ ಭೂಷಣ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ. ಅನೇಕರು ನಮ್ಮ ಹೋರಾಟವನ್ನು ಟೂಲ್​ ಕಿಟ್​ ಎಂದು ಬಿಂಬಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಹೇಳಿದರು.

ನಾವು ಈ ಪ್ರತಿಭಟನೆಯನ್ನು ಜನವರಿಯಲ್ಲಿ ಪ್ರಾರಂಭಿಸಿದ್ದೇವೆ ಮತ್ತು ಇಬ್ಬರು ಬಿಜೆಪಿ ನಾಯಕರಿಂದ ಪೂರ್ವಾನುಮತಿ ಪಡೆದಿದ್ದೇವೆ ಅದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ದಾಖಲೆಯನ್ನು 11 ನಿಮಿಷದ ವಿಡಿಯೋದಲ್ಲಿ ತೋರಿಸಿದ್ದಾರೆ. ಇದರ ಜತೆಗೆ ಲೈಂಗಿಕ ಕಿರುಕುಳದ ವಿರುದ್ಧ ಕುಸ್ತಿಪಟುಗಳು ಹಿಂದೆ ಏಕೆ ಮಾತನಾಡಲಿಲ್ಲ ಎಂಬುದನ್ನೂ ಸಾಕ್ಷಿ ಮಲಿಕ್ ಹೇಳಿದ್ದಾರೆ. “ನಾವು ಹೆಚ್ಚು ಕಾಲ ಸುಮ್ಮನಿದ್ದೆವು ಎಂದು ಆರೋಪಿಸಲಾಗುತ್ತಿದೆ ಆದರೆ ಅದಕ್ಕೆ ಹಲವು ಕಾರಣಗಳಿವೆ ನಾವು ಒಗ್ಗಟ್ಟಾಗಿರಲಿಲ್ಲ ಮತ್ತು ಎರಡನೆಯದಾಗಿ ಅಲ್ಲಿ ಅಪ್ರಾಪ್ತ ವಯಸ್ಕರು ಇದ್ದರು” ಎಂದು ಸಾಕ್ಷಿ ಹೇಳಿದರು.

ಇದನ್ನೂ ಓದಿ Wrestlers Protest: ಬ್ರಿಜ್​ ಭೂಷಣ್​ ಮನೆಗೆ ಬಂದ ಅಪರಿಚಿತ ವ್ಯಕ್ತಿಯ ಬಂಧನ

ಕಳೆದ ವಾರ ಬ್ರಿಜ್​ ಭೂಷಣ್​ ವಿರುದ್ಧ ದಿಲ್ಲಿ ಪೊಲೀಸರು ಕೋರ್ಟ್​ಗೆ 500 ಪುಟಗಳ ಚಾರ್ಚ್​ಶೀಟ್​ ಸಲ್ಲಿಸಿದ್ದಾರೆ. ಡಬ್ಲ್ಯುಎಫ್‌ಐ ಚುನಾವಣೆಯು ಜುಲೈ 6 ರಂದು ನಡೆಯಲಿದೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಜೂನ್ 19 ರಂದು ಪ್ರಾರಂಭವಾಗಲಿದೆ. ಸದ್ಯ ಈ ಚುನಾವಣೆಯಲ್ಲಿ ಬ್ರಿಜ್​ ಭೂಷಣ್​ ಸಂಬಂಧಿಗಳು ಸ್ಪರ್ಧಿಸಬಾರದು ಎನ್ನುವುದು ಕುಸ್ತಿಪಟುಗಳ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Exit mobile version