Site icon Vistara News

Wrestlers Protest: ಕುಸ್ತಿಪಟುಗಳ ಮಧ್ಯೆಯೇ ರಾಜಕೀಯ ಕಿತ್ತಾಟ ಆರಂಭ

babita phogat

ನವದೆಹಲಿ: ಭಾರತದ ಕುಸ್ತಿ ಫೆಡರೇಶನ್​ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್(Brij Bhushan Sharan Singh) ಬಂಧನಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ(Wrestlers Protest) ಮಧ್ಯೆ ಇದೀಗ ರಾಜಕೀಯ ಕಿತ್ತಾಟವೊಂದು ಆರಂಭವಾಗಿದೆ. ಮಾಜಿ ಕಾಮನ್​ವೆಲ್ತ್​ ಗೇಮ್​ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್(Babita Phogat) ಅವರು ಟ್ವೀಟ್​ವೊಂದನ್ನು ಮಾಡಿ ಸಾಕ್ಷಿ ಮಲಿಕ್(sakshi malik) ಅವರು “ಕಾಂಗ್ರೆಸ್​ನ ಕೈಗೊಂಬೆ” ಎಂದು ಆರೋಪಿಸಿದ್ದಾರೆ.

ಟ್ವೀಟ್​ ಮಾಡಿರುವ ಬಬಿತಾ ಅವರು “ನನ್ನ ಸಹೋದರಿ ಸಾಕ್ಷಿ ಮತ್ತು ಅವಳ ಗಂಡನ ವಿಡಿಯೋ ನೋಡುವಾಗ ನನಗೆ ತುಂಬಾ ಬೇಸರವಾಯಿತು. ಜತೆಗೆ ನಗು ಕೂಡಾ ಬಂತು. ಈ ವಿಡಿಯೊದಲ್ಲಿ ಸಾಕ್ಷಿ ಮಲಿಕ್ ತೋರಿಸಿದ ಅನುಮತಿ ಪತ್ರದಲ್ಲಿ ನನ್ನ ಸಹಿ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಗೌರವಾನ್ವಿತ ಪ್ರಧಾನಿ ಮೋದಿ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಸತ್ಯ ಹೊರಬರುತ್ತದೆ. ಒಬ್ಬ ಮಹಿಳಾ ಆಟಗಾರ್ತಿಯಾಗಿ ನಾನು ದೇಶದ ಎಲ್ಲ ಆಟಗಾರ್ತಿಯರ ಜತೆಗಿರುತ್ತೇನೆ, ಮುಂದೆಯೂ ಕೂಡ ಇರುತ್ತೇನೆ. ಆದರೆ ಸಾಕ್ಷಿ ಅವರು ಈ ಪ್ರಕರಣದಲ್ಲಿ ಕಾಂಗ್ರೆಸ್​ನ ಕೈಗೊಂಬೆಯಾಗಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಹೇಳಿದ್ದಾರೆ.

“ನೀವು ಬಾದಾಮಿ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನಬಹುದು, ಆದರೆ ನಾವು ನನ್ನ ದೇಶದ ಜನರು ಗೋಧಿಯಿಂದ ತಯಾರಿಸಿದ ಬ್ರೆಡ್ ಕೂಡ ತಿನ್ನುತ್ತೇವೆ. ನೀವು ಕಾಂಗ್ರೆಸ್ ಕೈಗೊಂಬೆಯಾಗಿದ್ದೀರಿ ಎಂದು ದೇಶದ ಜನರಿಗೆ ಅರ್ಥವಾಗಿದೆ. ನಿಮ್ಮ ನಿಜವಾದ ಉದ್ದೇಶವನ್ನು ಹೇಳಬೇಕಾದ ಸಮಯ ಬಂದಿದೆ” ಎಂದು ಭಾರತೀಯ ಜನತಾ ಯುವ ಮೋರ್ಚಾದ ಸಹ ಉಸ್ತುವಾರಿ ಆಗಿರುವ ಬಬಿತಾ ಫೋಗಟ್ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಟ್ವಿಟರ್​ನಲ್ಲಿ ವಿಡಿಯೊ ಮೂಲಕ ಸಾಕ್ಷಿ ಮಲಿಕ್​ ಮತ್ತು ಅವರ ಪತಿ ಸತ್ಯವರ್ತ್ ಕಡಿಯನ್(Satyawart Kadian) ವಿಡಿಯೊವೊಂದನ್ನು ಹಂಚಿಕೊಂಡು ತಮ್ಮ ಹೋರಾಟ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವೇ ಹೊರತು ಕೇಂದ್ರ ಸರ್ಕಾರದ ವಿರುದ್ಧ ಅಲ್ಲ. ನಾವು ಪ್ರತಿಭಟನೆಗೆ ನಡೆಸಲು ಇಬ್ಬರು ಬಿಜೆಪಿ ನಾಯಕರಿಂದ ಪೂರ್ವಾನುಮತಿ ಪಡೆದಿದ್ದೇವೆ ಅದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ದಾಖಲೆಯನ್ನು 11 ನಿಮಿಷದ ವಿಡಿಯೋದಲ್ಲಿ ತೋರಿಸಿದ್ದರು. ಇದೇ ವಿಚಾರಕ್ಕೆ ಬಬಿತಾ ಅವರು ಸ್ಪಷ್ಟನೆ ನೀಡುವ ವೇಳೆ ಸಾಕ್ಷಿ ಅವರನ್ನು ಕಾಂಗ್ರೆಸ್​ನ ಕೈಗೊಂಬೆ ಎಂದು ಹೇಳಿದ್ದಾರೆ.

ಇದನ್ನೂ ಓದಿ Wrestlers Protest: ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟವಿಲ್ಲ; ಸಾಕ್ಷಿ ಮಲಿಕ್​

ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಮೇಲಿನ ಆರೋಪಗಳ(Wrestlers Row) ತನಿಖೆಗೆ ಕ್ರೀಡಾ ಸಚಿವಾಲಯ ನೇಮಿಸಿರುವ ಮೇಲುಸ್ತುವಾರಿ ಸಮಿತಿಯಲ್ಲಿ ಬಬಿತಾ ಅವರಿಗೂ ಸ್ಥಾನ ನೀಡಲಾಗಿತ್ತು. ಆದರೆ ಇದಕ್ಕೆ ಸಾಕ್ಷಿ ಮಲಿಕ್​ ಅವರು ವಿರೋಧ ವ್ಯಕ್ತಪಡಿಸಿದ್ದರು. ಅವರು ಬಿಜೆಪಿ ಪಕ್ಷದಲ್ಲಿ ಇರುವ ಕಾರಣ ಬಿಜೆಪಿ ಸಂಸದರೂ ಆಗಿರುವ ಬ್ರಿಜ್​ ಭೂಷಣ್​ಗೆ ಬೆಂಬಲ ಸೂಚಿಸಬಹುದು ಎಂದು ಹೇಳಿದ್ದರು.

Exit mobile version