ನವದೆಹಲಿ: ಕುಸ್ತಿಪಟುಗಳು ಜಂತರ್‌ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ(Wrestlers Protest) ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರು ನೀಡಿದ್ದ ಹೇಳಿಕೆಗೆ ವಿನೇಶ್ ಫೋಗಟ್ ಅವರು ತಿರುಗೇಟು ನೀಡಿದ್ದಾರೆ. ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಪ್ರತಿಭಟನಾ ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾರೆ.
ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಭಾರತ ಪ್ರಮುಖ ಕುಸ್ತಿಪಟುಗಳು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ(Wrestlers Protest) ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ಪಿಟಿಐ ಸುದ್ದಿ ಸಂಸ್ಥೆ ನಡೆಸಿದ್ದ ಸಂದರ್ಶನವೊಂದರಲ್ಲಿ ಸೌರವ್ ಗಂಗೂಲಿ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಯಿತು. ಇದಕ್ಕೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ್ದ ಗಂಗೂಲಿ ಅವರು “ಪ್ರತಿಭಟನೆ ಮಾಡಲಿ. ಅಲ್ಲಿ ಏನಾಗುತ್ತಿದೆ ಎಂದು ನನಗೆ ಸಂಪೂರ್ಣ ಜ್ಞಾನವಿಲ್ಲ. ನಾನು ಈ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೇನೆ ಅಷ್ಟೇ. ನಮಗೆ ತಿಳಿದಿರದ ವಿಚಾರದ ಬಗ್ಗೆ ಸುಮ್ಮನೆ ಮಾತನಾಡಿದರೆ ಅದು ತಪ್ಪಾಗುತ್ತದೆ” ಎಂದು ಹೇಳುವ ಮೂಲಕ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ಇದನ್ನೂ ಓದಿ Wrestlers Protest: ಕುಸ್ತಿ ಪಟುಗಳ ಪ್ರತಿಭಟನೆ ಬಗ್ಗೆ ಗಂಗೂಲಿ ನೀಡಿದ ಹೇಳಿಕೆಗೆ ನೆಟ್ಟಿಗರ ಆಕ್ರೋಶ
ಇದೀಗ ಗಂಗೂಲಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರತಿಭಟನಾನಿರತ ಕುಸ್ತಿಪಟು ವಿನೇಶ್ ಫೋಗಟ್ ಅವರು ಸೌರವ್ ಗಂಗೂಲಿ ಅವರು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಬಯಸಿದರೆ ದೆಹಲಿಯ ಜಂತರ್ ಮಂತರ್‌ಗೆ ಕ್ರೀಡಾಪಟುವಾಗಿ ಬರಬಹುದು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಬೆದರಿಕೆಯೊಡ್ಡಿದ ಕುಸ್ತಿಪಟುಗಳು
ಬುಧವಾರ ರಾತ್ರಿ ದೆಹಲಿ ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ಹೊಡೆದಾಟ ನಡೆದ ಕಾರಣ ಇಬ್ಬರು ಕುಸ್ತಿಪಟುಗಳು ಗಾಯಗೊಂಡಿದ್ದರು. ಪೊಲೀಸರ ಕೆಟ್ಟ ವರ್ತನೆಯಿಂದ ಆಘಾತಗೊಂಡಿರುವ ಕುಸ್ತಿಪಟುಗಳು ಪದ್ಮಶ್ರೀ ಸಹಿತ ತಾವು ಗಳಿಸಿರುವ ಪದಕಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವ ಬೆದರಿಕೆಯೊಡ್ಡಿದ್ದಾರೆ. ಇಂತಹ ಅವಮಾನಗಳಿಂದ ನಾವು ದೇಶಕ್ಕಾಗಿ ಗಳಿಸಿರುವ ಗೌರವಗಳು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ನಮಗೆ ನ್ಯಾಯ ಸಿಗುವ ವರೆಗೆ ಇಲ್ಲಿಂದ ತೆರಳುವ ಪ್ರಶ್ನೇಯೇ ಇಲ್ಲ ಪಟ್ಟು ಹಿಡಿದಿದ್ದಾರೆ.