ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೇರಿದಂತೆ ತರಬೇತುದಾರರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರ ಆರೋಪ ಕೇಳಿಬಂದ(Wrestlers Protest) ಹಿನ್ನೆಲೆಯಲ್ಲಿ ಫೆಡರೇಶನ್ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಶನಿವಾರ ಕ್ರೀಡಾ ಸಚಿವಾಲಯ ತಕ್ಷಣ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತುಗೊಳಿಸಿದೆ.
ಈಗಾಗಲೇ ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ಜತೆಗೆ ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದೆ. ಇದೇ ಕಾರಣಕ್ಕೆ ಕುಸ್ತಿಪಟುಗಳು ತಮ್ಮ ಧರಣಿಯನ್ನು ಅಂತ್ಯಗೊಳಿಸಿದ್ದಾರೆ. ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿರುವ ಕ್ರೀಡಾ ಸಚಿವಾಲಯ ತನಿಖೆಯ ಭಾಗವಾಗಿ ಪೆಡರೇಶನ್ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದೆ.
ಶನಿವಾರ ಈ ವಿಚಾರವನ್ನು ಕೇಂದ್ರ ಕ್ರೀಡಾ ಸಚಿವಾಲಯ ಖಚಿತ ಪಡಿಸಿದೆ. ಜತೆಗೆ ಗೊಂಡಾದಲ್ಲಿ ಪ್ರಾರಂಭವಾಗಬೇಕಿದ್ದ ಓಪನ್ ಚಾಂಪಿಯಶಿಪ್ ಕುಸ್ತಿ ಟೂರ್ನಿಯನ್ನು ರದ್ದುಗೊಳಿಸಿದೆ. ಶೀಘ್ರದಲ್ಲೇ ರಚನೆಯಾಗಲಿರುವ ಸಚಿವಾಲಯದ ಉಸ್ತುವಾರಿ ಸಮಿತಿಯು ಭಾರತೀಯ ಕುಸ್ತಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿರಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Wrestlers Protest | ಲೈಂಗಿಕ ಕಿರುಕುಳ ಪ್ರಕರಣ; ಕುಸ್ತಿಪಟುಗಳ ಹೋರಾಟ ಅಂತ್ಯ