ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಸವಾಲನ್ನು ಕುಸ್ತಿಪಟುಗಳು ಒಪ್ಪಿಕೊಂಡಿದ್ದು ಮಂಪರು ಪರೀಕ್ಷೆ(Narco Test) ಹಾಗೂ ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ಧರಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಸೋಮವಾರ ಬ್ರಿಜ್ ಭೂಷಣ್ ಅವರು ಮಂಪರು ಪರೀಕ್ಷೆ ತಾನು ರೆಡಿಯಾಗಿದ್ದೇನೆ ನನ್ನ ಜತೆ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಈ ಪರೀಕ್ಷೆಗೆ ಒಳಗಾಗಬೇಕು ಎಂದು ಸವಾಲು ಹಾಕಿದ್ದರು.
ಇದೇ ವಿಚಾರವಾಗಿ ಮಾತನಾಡಿದ ಬಜರಂಗ್ ಪುನಿಯಾ ಅವರು ಮಾಧ್ಯಮಗಳ ಮುಂದೆ “ಮಂಪರು ಪರೀಕ್ಷೆ ಒಳಗಾಗುವ ಬ್ರಿಜ್ಭೂಷಣ್ ಶರಣ್ ಸಿಂಗ್ ಸವಾಲನ್ನು ಸ್ವೀಕರಿಸಿದ್ದೇವೆ. ಆದರೆ ಅವರು ಕೂಡ ಈ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ರಾಷ್ಟ್ರೀಯ ವಾಹಿನಿಯ ನೇರಪ್ರಸಾರದಲ್ಲಿ ಎದುರಿಸಬೇಕು ಎಂಬುದು ನಮ್ಮ ಒತ್ತಾಯ’ ಎಂದು ಬಜರಂಗ್ ಹೇಳಿದ್ದಾರೆ.
“ಕೇವಲ ನಾನು ಮತ್ತು ವಿನೇಶ್ ಫೋಗಟ್ ಮಾತ್ರವಲ್ಲದೆ ಆರೋಪ ಮಾಡಿರುವ ಎಲ್ಲ ಕುಸ್ತಿ ಪಟುಗಳು ಕೂಡ ಈ ಪರೀಕ್ಷೆ ಎದುರಿಸಲು ಸಿದ್ಧರಿದ್ದೇವೆ. ನಾವು ಯಾವ ರೀತಿಯ ಶೋಷಣೆ ಮತ್ತು ಅನ್ಯಾಯ ಎದುರಿಸಿದೆವು ಎಂದು ಇಡೀ ದೇಶಕ್ಕೆ ತಿಳಿಯಬೇಕು’ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ವಿನೇಶ್ ಫೋಗಟ್ ಅವರು ಕೆಲವು ಮಾಧ್ಯಮಗಳು ಬ್ರಿಜ್ಭೂಷಣ್ ಅವರ ಹೇಳಿಕೆಯನ್ನು ವೈಭವೀಕರಿಸುತ್ತಿವೆ ಎಂದು ಆರೋಪ ಮಾಡಿದರು.
ಇದನ್ನೂ ಓದಿ Wrestlers Protest: ನಾರ್ಕೋ ಪರೀಕ್ಷೆಗೆ ಸಿದ್ಧ; ಬ್ರಿಜ್ ಭೂಷಣ್ ಶರಣ್ ಸಿಂಗ್
ಫೇಸ್ ಬುಕ್ ಪೋಸ್ಟ್ ಹಾಕಿದ್ದ ಬ್ರಿಜ್ ಭೂಷಣ್, “ನಾನು ನಾರ್ಕೋ ಪರೀಕ್ಷೆ, ಪಾಲಿಗ್ರಾಫ್ ಪರೀಕ್ಷೆ ಅಥವಾ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ, ಆದರೆ ನನ್ನದು ಒಂದು ಸವಾಲಿದೆ. ನನ್ನ ವಿರುದ್ಧ ಆರೋಪ ಮಾಡಿರುವ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕೂಡ ಅವುಗಳನ್ನು ಮಾಡಬೇಕು. ಇದನ್ನು ಒಪ್ಪಿದರೆ ನಾನು ಪರೀಕ್ಷೆಗೆ ಸಿದ್ಧನಿದ್ದೇನೆ” ಎಂದು ಹೇಳಿದ್ದರು. ಇದಕ್ಕೂ ಮುನ್ನ ಕುಸ್ತಿಪಟುಗಳು ಈ ಸವಾಲನ್ನು ಬ್ರಿಜ್ ಭೂಷಣ್ ಹಾಕಿದ್ದರು. ಇದೀಗ ಅವರ ಪ್ರತಿಕ್ರಿಯೆ ಬಳಿಕ ಮತ್ತೊಮ್ಮೆ ಇದೇ ಸವಾಲನ್ನು ಪುನರುಚ್ಚರಿಸಿದ್ದಾರೆ. ಸದ್ಯ ಈ ಪ್ರಕರಣ ಯಾವ ರೀತಿಯಲ್ಲಿ ಅಂತ್ಯ ಕಾಣಲಿದೆ ಎಂದು ಕಾದು ನೋಡಬೇಕಿದೆ.