Site icon Vistara News

Wrestlers Protest: ಕುಸ್ತಿ ಫೆಡರೇಷನ್​ಗೆ ಎಚ್ಚರಿಕೆ ನೀಡಿದ ವಿಶ್ವ ಒಕ್ಕೂಟ

support on wrestlers protest

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದು ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಒಲಿಂಪಿಯನ್​ ಕುಸ್ತಿಪಟುಗಳಿಗೆ ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ ಬೆಂಬಲ ಸೂಚಿಸಿದೆ. ಜತೆಗೆ ಭಾನುವಾರ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿದೆ.

ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ಮಾಡಿರುವ ಆರೋಪದ ಕುರಿತು ಕೂಡಲೇ ನಿಷ್ಪಕ್ಷ ತನಿಖೆ ನಡೆಸಬೇಕು. ಜತೆಗೆ ತಕ್ಷಣವೇ ಕುಸ್ತಿ ಫೆಡರೇಷನ್‌ಗೆ ಚುನಾವಣೆ ನಡೆಸಬೇಕು. ತಪ್ಪಿದಲ್ಲಿ ಫೆಡರೇಷನ್‌ನ ಮಾನ್ಯತೆ ರದ್ದುಮಾಡಲಾಗುವುದು ಎಂದು ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ ಭಾರತಕ್ಕೆ ಎಚ್ಚರಿಸಿದೆ.

“ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ” ಎಂದು ಕುಸ್ತಿಪಟುಗಳು ತಾವು ದೇಶಕ್ಕಾಗಿ ಗೆದ್ದ ಪದಕಗಳನ್ನೆಲ್ಲ ಮಂಗಳವಾರ ಗಂಗಾ ನದಿಯಲ್ಲಿ ಎಸೆಯಲು ಮುಂದಾಗಿದ್ದರು. ಸಂಜೆ ಆರು ಗಂಟೆ ಸುಮಾರಿಗೆ ಕುಸ್ತಿಪಟುಗಳು ಹರಿದ್ವಾರಕ್ಕೆ ಆಗಮಿಸಿದ್ದರು. ಆದರೆ ಖಾಪ್‌ ಸದಸ್ಯರು ಮತ್ತು ರೈತ ನಾಯಕರು ಕುಸ್ತಿಪಟುಗಳ ಮನವೊಲಿಸಿ ಪದಕಗಳನ್ನು ಎಸೆಯದಂತೆ ತಡೆದರು. ಸದ್ಯ ಕೇಂದ್ರಕ್ಕೆ 5 ದಿನಗಳ ಗಡುವು ಕೊಟ್ಟಿರುವ ಖಾಪ್‌ ಸದಸ್ಯರು ಮತ್ತು ಕುಸ್ತಿಪಟುಗಳು ಬ್ರಿಜ್​ ಭೂಷಣ್​ ಅವರ ಬಂಧನವಾಗದಿದ್ದರೆ ಪ್ರತಿಭಟನೆ ದೇಶದಾದ್ಯಂತ ವಿಸ್ತರಿಸುವ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಕುಸ್ತಿಪಟುಗಳ ಈ ಹೋರಾಟಕ್ಕೆ ಅನೇಕ ಕ್ರೀಡಾಪಟುಗಳು, ರಾಜಕೀಯ ನಾಯಕರು ಸೇರಿದಂತೆ ಸಿನಿಮಾ ಕ್ಷೇತ್ರದಿಂದಲೂ ಬೆಂಬಲ ವ್ಯಕ್ತವಾಗಿದೆ. ಕೆಲ ಸಂಘಟನೆಗಳು ಕೂಡ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯದಿದ್ದರೆ ಪ್ರತಿಭಟನೆಯನ್ನು ಉಗ್ರ ರೀತಿಯಲ್ಲಿ ನಡೆಸುವುದಾಗಿ ತಿಳಿಸಿದೆ.

ಇದನ್ನೂ ಓದಿ Wrestlers Protest: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಕ್ರಿಕೆಟಿಗ ಅನಿಲ್‌ ಕುಂಬ್ಳೆ

ಪೊಲೀಸರ ದೌರ್ಜನ್ಯಕ್ಕೆ ತೀವ್ರ ಖಂಡನೆ

ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಈ ವೇಳೆ ಸಂಸತ್​ ಭವನಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಈ ಕುಸ್ತಿಪಟುಗಳನ್ನು ಪೊಲೀಸರು ತಡೆದು ಅವರನ್ನು ಅತ್ಯಂತ ಅಮಾನುಷವಾಗಿ ರಸೆಯಲ್ಲಿ ಎಳೆದಾಡಿ ಬಂಧಿಸಿದ್ದರು. ಘಟನೆ ಬಳಿಕ ಪೊಲೀಸರ ಈ ನಡೆಗೆ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಸೇರಿ ದೇಶದ ಅಗ್ರಮಾನ್ಯ ಕ್ರೀಡಾಪಟುಗಳು ಖಂಡನೆ ವ್ಯಕ್ತಪಡಿಸಿ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು.

Exit mobile version