ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಮನದ ಮಾತುಗಳನ್ನು ಯಾಕೆ ಕೇಳುತ್ತಿಲ್ಲ. ದಯವಿಟ್ಟು ನಮ್ಮ ಮನ್ ಕಿ ಬಾತ್ ಕೂಡ ಆಲಿಸಿ ಎಂದು ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ಪ್ರತಿಭಟನೆ ಕುಳಿತಿರುವ ಕುಸ್ತಿಪಟುಗಳು ಮನವಿ ಮಾಡಿದ್ದಾರೆ. ಕುಸ್ತಿ ಒಕ್ಕೂಟದ ಅಧ್ಯಕ್ಷರಾದ ಬ್ರಿಜ್ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತಿರುವ ಹೊರತಾಗಿಯೂ ಸಮಿತಿ ಅವರಿಗೆ ಕ್ಲೀನ್ಚಿಟ್ ಕೊಟ್ಟಿರುವುದನ್ನು ವಿರೋಧಿಸಿ ಅಂತಾರಾಷ್ಟ್ರಿಯ ಕುಸ್ತಿಪಟುಗಳ ತಂಡ ನವ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ಕುಳಿತಿದೆ. ಈ ತಂಡ ಪ್ರಧಾನಿ ಮೋದಿಯವರಿಗೆ ಸಮಸ್ಯೆಯನ್ನು ಬಗೆಹರಿಸಿ ಎಂದು ಮಾಧ್ಯಮ ಗೋಷ್ಠಿಯಲ್ಲಿ ಮನವಿ ಮಾಡಿದೆ.
ಗಂಭೀರ ಆರೋಪಗಳ ಕುರಿತು ತನಿಖೆ ನಡೆಸಲು ಉಸ್ತುವಾರಿ ಸಮಿತಿಯನ್ನು ರಚಿಸಿದ ನಂತರ ಸತ್ಯಾಗ್ರಹವನ್ನು ಕುಸ್ತಿಪಟುಗಳು ಅಂತ್ಯಗೊಳಿಸಿದ್ದರು. ಆದರೆ, ಸಮಿತಿಯೂ ಕುಸ್ತಿಪಟುಗಳ ಆರೋಪ ಸುಳ್ಳು ಎಂದು ಬ್ರಿಜ್ಭೂಷಣ್ ಪರ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೂರು ತಿಂಗಳ ನಂತರ ದೇಶದ ಅಗ್ರ ಕುಸ್ತಿಪಟುಗಳು ಕಳೆದ ಭಾನುವಾರದಿಂದ ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ತಮ್ಮ ಪ್ರತಿಭಟನೆ ಪುನರಾರಂಭಿಸಿದ್ದರು.
ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ರಾಜಕೀಯ ಮುಖಂಡರು ಹಾಗೂ ರೈತರಿಂದಲೂ ಬೆಂಬಲ ದೊರಕುತ್ತಿದೆ. ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ತಮ್ಮ ಬೆಂಬಲ ಸೂಚಿಸಿದ್ದರು. ಈ ವೇಳೆ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಎತ್ತಿ ಹಿಡಿದ ಕ್ರೀಡಾಪಟುಗಳು ಇದೀಗ ನ್ಯಾಯಕ್ಕಾಗಿ ಹೋರಾಟ ನಡೆಸುವ ಸ್ಥಿತಿ ಎದುರಾಗಿರುವುದು ನಾಚಿಕೆಗೇಡು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾವು ಪದಕಗಳನ್ನು ಗೆದ್ದಾಗ ಕರೆಸಿ ಸನ್ಮಾನ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಇದೀಗ ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ಆಶ್ವರ್ಯ ತಂದಿದೆ ಎಂದು ಕುಸ್ತಿಪಟುಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ‘ಬೇಟಿ ಬಚಾವೋ, ಬೇಟಿ ಪಡಾವೊ’ದ ಬಗ್ಗೆ ಮಾತನಾಡುತ್ತಾರೆ. ಪ್ರತಿಯೊಬ್ಬರ ‘ಮನ್ ಕಿ ಬಾತ್’ ಆಲಿಸುತ್ತಾರೆ. ಅವರು ನಮ್ಮ ‘ಮನ್ ಕಿ ಬಾತ್’ ಕೇಳಲು ಅವರಿಗೆ ಸಾಧ್ಯವಿಲ್ಲವೇ? ನಾವು ಪದಕಗಳನ್ನು ಗೆದ್ದಾಗ ನಮ್ಮನ್ನು ಅವರ ಮನೆಗೆ ಆಹ್ವಾನಿಸಿ ಗೌರವ ನೀಡುತ್ತಾರೆ. ಅಲ್ಲಿ ನಮ್ಮನ್ನು ಅವರ ಹೆಣ್ಣುಮಕ್ಕಳು ಎಂದು ಕರೆಯುತ್ತಾರೆ. ಇದೀಗ ಅವರು ನಮ್ಮ ‘ಮನ್ ಕಿ ಬಾತ್’ ಕೇಳಬೇಕೆಂದು ಅವರಿಗೆ ಮನವಿ ಮಾಡುತ್ತೇವೆ ಎಂದು ರಿಯೊ ಗೇಮ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.
ಕಾಕತಾಳಿಯವೆಂದರೆ, ಕುಸ್ತಿಪಟುಗಳು ನಮ್ಮ ಮನ್ಕಿ ಬಾತ್ ಆಲಿಸಿ ಎಂದು ಮನವಿ ಮಾಡಿದ ಸಂದರ್ಭದಲ್ಲಿಯೇ ಪ್ರಧಾನಿ ಮೋದಿ ಅವರ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ಕಿ ಬಾತ್, 100ನೇ ಅವೃತ್ತಿಯನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ.
ಸ್ಮೃತಿ ಇರಾನಿಯವರೇ ಬನ್ನಿ ಬೆಂಬಲ ನೀಡಿ
ಸಾಕ್ಷಿ ಮಲಿಕ್ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಮೌನವನ್ನೂ ಪ್ರಶ್ನಿಸಿದ್ದಾರೆ. ನಾಲ್ಕು ದಿನಗಳಿಂದ ನಾವು ಫುಟ್ಪಾತ್ ಮೇಲೆ ಮಲಗಿದ್ದೇವೆ. ಸೊಳ್ಳೆ ಕಚ್ಚಿಸಿಕೊಂಡು ನೋವು ಅನುಭವಿಸುತ್ತಿದೆ. ಡೆಲ್ಲಿ ಪೊಲೀಸರು ಆಹಾರ ತಯಾರಿಸಲು ಮತ್ತು ಅಭ್ಯಾಸ ನಡೆಸಲೂ ಬಿಡುತ್ತಿಲ್ಲ. ನಾವು ಇಷ್ಟೆಲ್ಲ ಕಷ್ಟದಲ್ಲಿರುವಾಗ ನೀವ್ಯಾಕೆ ಮೌನವಾಗಿದ್ದೀರಿ. ದಯವಿಟ್ಟು ಇಲ್ಲಿಗೆ ಬನ್ನಿ. ನಮ್ಮ ಮಾತುಗಳನ್ನು ಆಲಿಸಿ ಹಾಗೂ ನಮಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : Wrestlers Protest: ಲೈಂಗಿಕ ಕಿರುಕುಳ ದೂರು ಹಿಂದೆಗೆದುಕೊಳ್ಳಲು ಕುಸ್ತಿಪಟುಗಳಿಗೆ ಬೆದರಿಕೆ, ಆಮಿಷ ಹಾಕಿದ ಡಬ್ಲ್ಯುಎಫ್‌ಐ ಅಧ್ಯಕ್ಷ
ವಿಶ್ವ ಚಾಂಪಿಯನ್ ವಿನೇಶ್ ಫೋಗಟ್ ಕೂಡ ಇದೇ ರೀತಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ನಮ್ಮ ಸತ್ಯಗಳು ಪ್ರಧಾನಿ ಮೋದಿಯವರಿಗೆ ತಲುಪುತ್ತಿಲ್ಲ ಎಂದು ಅನಿಸುತ್ತಿದೆ. ಅವರಿಗೆ ಫೋನ್ ಮಾಡಿ ವಿಷಯ ತಿಳಿಸಲೂ ಸರಿಯಾದ ಫೋನ್ ನಂಬರ್ ಕೂಡ ಇಲ್ಲ. ಹೀಗಾಗಿ ಮಾಧ್ಯಮಗಳ ಮೂಲಕ ವಿವರ ನೀಡುವಂತಾಗಿದೆ. ಮನ್ ಕಿ ಬಾತ್ ಕೇಳುವ ನಿಮಗೆ ನಮ್ಮ ಸಮಸ್ಯೆ ಬಗ್ಗೆ ಆಲಿಸಲು ಸಾಧ್ಯವೇ ಇಲ್ಲವೇ ಎಂದು ಹೇಳಿದ್ದಾರೆ.