ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ತೊಡೆ ತಟ್ಟಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಮ್ಮ ಬೆಂಗಲಿಗರೊಂದಿಗೆ ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ್ದಾರೆ.
ಒಲಿಂಪಿಯನ್ ಕುಸ್ತಿಪಟುಗಳಾದ ಬಜರಂಗ್ ಪೂನಿಯ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಸೇರಿ ಹಲವರು ತಮ್ಮ ಹಣೆಯ ಮೇಲೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಅವರ ಕೆಲವು ಬೆಂಬಲಿಗರು ಪ್ರತಿಭಟನೆಯ ಸಂಕೇತವಾಗಿ ತಮ್ಮ ಕೈಗಳಿಗೆ ಕಪ್ಪು ಪಟ್ಟಿ ಧರಿಸಿದ್ದರು. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕುಸ್ತಿ ಪಟುಗಳು ಕಳೆದ 19 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಕುಸ್ತಿ ಪಟುಗಳು ಮಾಡಿರುವ ಎಲ್ಲ ಆರೋಪಗಳನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ನಿರಾಕರಿಸಿದ್ದಾರೆ. ಆದರೆ ದಿಲ್ಲಿ ಪೊಲೀಸರು ಸುಪ್ರೀ ಕೋರ್ಟ್‌ನ ಸೂಚನೆಯಂತೆ ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ಇದ್ಯಾವುದಕ್ಕೂ ಕ್ಯಾರೆ ಇಲ್ಲವೆಂಬಂತೆ ಬ್ರಿಜ್ ಭೂಷಣ್ ಅವರು ತಮ್ಮ ವಿರುದ್ಧ ಮಾಡಿರುವ ಎಲ್ಲ ಆರೋಪಗಳನ್ನು ಸುಳ್ಳು ಎಂದು ಹೇಳಿದ್ದಾರೆ. ಜತೆಗೆ ಒಂದೊಮ್ಮೆ ಈ ಆರೋಪ ಸಾಭೀತಾದರೆ ತಾನು ನೇಣು ಬಿಗಿದು ಸಾಯಲೂ ಸಿದ್ಧ ಎಂದು ಕೆಲ ದಿನಗಳ ಸವಾಲು ಹಾಕಿದ್ದರು.
ಬ್ರಿಜ್ ಭೂಷಣ್ ಅವರು ಈ ಹೇಳಿಕೆ ನೀಡಿದ ಬಳಿಕ ಕುಸ್ತಿಪಟುಗಳು ಕೂಡ ಇದಕ್ಕೆ ತಿರುಗೇಟು ನೀಡಿದ್ದರು. ಮಂಪರು ಪರೀಕ್ಷೆಗೆ(Narco Test) ಹಾಗೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡುವಂತೆ ಅವರಿಗೆ ಸವಾಲು ಹಾಕಿದ್ದರು. “ನೀವು ತಪ್ಪಿತಸ್ಥರಲ್ಲ ಎಂಬ ವಿಶ್ವಾಸವಿದ್ದರೆ ಮಂಪರು ಪರೀಕ್ಷೆಗೆ ಒಳಗಾಗಿ, ಸುಳ್ಳು ಪತ್ತೆ ಪರೀಕ್ಷೆಯೂ ನಡೆಯಲಿ. ನಾವು ಕೂಡ ಈ ಎಲ್ಲ ಪರೀಕ್ಷೆಗಳಿಗೆ ಒಳಪಡಲು ಸಿದ್ಧರಿದ್ದೇವೆ. ಸತ್ಯ ಏನೆಂದು ಜಗತ್ತಿಗೆ ತಿಳಿಯಬೇಕಿದೆ” ಎಂದು ಹೇಳಿದ್ದರು.
ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ವಿರುದ್ಧ ಮಂಪರು ಪರೀಕ್ಷೆಯ ಅಸ್ತ್ರ ಪ್ರಯೋಗಿಸಿದ ಕುಸ್ತಿಪಟುಗಳು
ಬ್ರಿಜ್ ವಿರುದ್ಧ ಆರೋಪಗಳಿಗೆ ಸಂಬಂಧಿಸಿ ಅಪ್ರಾಪ್ತ ಕುಸ್ತಿಪಟು ಗುರುವಾರ ಮ್ಯಾಜಿಸ್ಪ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಉಳಿದ 6 ಮಂದಿಯ ಹೇಳಿಕೆ ಇನ್ನಷ್ಟೇ ದಾಖಲಾಗಬೇಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ 7 ಮಂದಿ ಕುಸ್ತಿಪಟುಗಳು ದಿಲ್ಲಿ ಪೊಲೀಸರಿಗೆ ಬ್ರಿಜ್ ಭೂಷಣ್ ವಿರುದ್ಧ ದೂರು ನೀಡಿದ್ದರು. ಸದ್ಯ ಈ ಪ್ರಕರಣ ಯಾವ ರೀತಿ ಸುಖಾಂತ್ಯ ಕಾಣಲಿದೆ ಎಂದು ಕಾದು ನೋಡಬೇಕಿದೆ.