ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಒಲಿಂಪಿಯನ್ ಕುಸ್ತಿಪಟುಗಳ ಪ್ರತಿಭಟನೆಗೆ ಮೇ 23 ರಂದು ಒಂದು ತಿಂಗಳು ಪೂರ್ಣಗೊಳ್ಳಲಿದೆ. ಇದೇ ದಿನ ಇಂಡಿಯಾ ಗೇಟ್‌ನಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಲು ಪ್ರತಿಭಟನಾ ಸಮಿತಿಯು ನಿರ್ಧರಿಸಿದೆ.
ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ನೇತೃತ್ವದಲ್ಲಿ, ಕುಸ್ತಿ ಸಂಸ್ಥೆಯ ಮುಖ್ಯಸ್ಥರನ್ನು ಬಂಧಿಸಲು ಕುಸ್ತಿಪಟುಗಳು ಹೋರಾಟ ನಡೆಸುತ್ತಿದ್ದಾರೆ. ಎಪ್ರಿಲ್ 23 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಸದ್ಯ ಮೇ 21ರ ಒಳಗಡೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಗುಡುವು ನೀಡಿದ್ದರು. ಆದರೆ ಅವರ ಬಂಧನವಾಗದ ಹಿನ್ನೆಲೆ ಇದೀಗ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಕೂಡ ಬೆಂಬಲ ಸೂಚಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ವಿನೇಶ್ ಫೋಗಟ್ ಅವರು ದೆಹಲಿಯಲ್ಲಿ ಕಳೆದ ವರ್ಷ ನಡೆದ ರೈತ ಪ್ರತಿಭಟನೆಯ ರೀತಿಯಲ್ಲಿಯೇ ನಮ್ಮ ಪ್ರತಿಭಟನೆಯೂ ನಡೆಯಬಹುದು. ಈಗಾಗಲೇ ಖಾಪ್ ಪಂಚಾಯತ್ ಉನ್ನತ ಮಟ್ಟದ ಸಭೆಗಳನ್ನು ನಡೆಸಿವೆ. ಅವರ ನಿರ್ಧಾರಕ್ಕೆ ಅನುಸಾರವಾಗಿ ನಾವು ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ. ಇದು ದೇಶದ ಹಿತಾಸಕ್ತಿಗೆ ಗಾಸಿಯನ್ನು ಉಂಡುಮಾಡಲೂಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ದೆಹಲಿಯ ಹೊರ ಭಾಗಗಳಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ Wrestlers Protest: ಕುಸ್ತಿಪಟುಗಳ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ಬ್ರಿಜ್ ಭೂಷಣ್
ಕಾಂಗ್ರೆಸ್ ನಾಯಕರ ಬೆಂಬಲ
ಕೆಲ ದಿನಗಳ ಹಿಂದೆ ಕುಸ್ತಿಪಟುಗಳನ್ನು ಕಾಂಗ್ರೆಸ್ ನಾಯಕರಾದ ರಣ್‌ದೀಪ್ ಸುರ್ಜೆವಾಲಾ, ಸಚಿನ್ ಪೈಲಟ್ ಭೇಟಿ ಮಾಡಿದ್ದರು. ಪ್ರತಿಭಟನೆಗೆ ಬೇಕಾದ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು. ಇದೇ ವೇಳೆ ಮಾತನಾಡಿದ್ದ ಸಚಿನ್ ಪೈಲಟ್ ಅವರು ‘ಕುಸ್ತಿಪಟುಗಳಿಗೆ ನ್ಯಾಯ ಸಿಗುವುದಾದರೆ ಕಾನೂನು ರೀತಿಯಲ್ಲಿ ಯಾವುದೇ ಹೋರಾಟ ನಡೆಸಲು ಸಿದ್ಧ ಎಂದಿದ್ದರು.