ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ಭೂಷನ್ ಸಿಂಗ್ ಶರಣ್ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸಿದೆ. ಇದರ ಬೆನ್ನಲ್ಲೇ ಕುಸ್ತಿಪಟುಗಳು ಸಚಿವ ಅನುರಾಗ್ ಠಾಕೂರ್ ಅವರ ನಿವಾಸಕ್ಕೆ ತೆರಳಿದ್ದಾರೆ.
ಕುಸ್ತಿಪಟುಗಳೊಂದಿಗೆ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅವರ ಎಲ್ಲ ಆರೋಪಗಳನ್ನು ಆಲಿಸಲು ಸಿದ್ಧವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕುಸ್ತಿಪಟುಗಳು ಮಾತುಕತೆಗೆ ಆಗಮಿಸಿದ್ದಾರೆ.
“ಸರ್ಕಾರವು ಕುಸ್ತಿಪಟುಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧವಾಗಿದೆ ಅದಕ್ಕಾಗಿ ನಾನು ಮತ್ತೊಮ್ಮೆ ಕುಸ್ತಿಪಟುಗಳನ್ನು ಚರ್ಚೆಗೆ ಆಹ್ವಾನಿಸಿದ್ದೇನೆ” ಎಂದು ಅನುರಾಗ್ ಠಾಕೂರ್ ಬುಧವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಪ್ರತಿಭಟನೆ ನಡೆಸಿದ ಆರಂಭದಲ್ಲಿಯೂ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳೊಂದಿಗೆ ಮಾತುಕತೆ ನೀಡಿ ನ್ಯಾಯ ಒದಗಿಸುವಂತೆ ಭರವಸೆ ನೀಡಿದ್ದರು. ಇದಾದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿದ್ದಿದ್ದರು. ಆದರೆ ತಿಂಗಳುಗಳು ಕಳೆದರೂ ಯಾವುದೇ ನ್ಯಾಯ ಸಿಗದ ಕಾರಣ ಕುಸ್ತಿಪಟುಗಳು ಮತ್ತೆ ಪ್ರತಿಭಟನೆ ಆರಂಭಿಸಿದ್ದರು.
ಕಳೆದ ಭಾನುವಾರ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಕುಸ್ತಿಪಟುಗಳ ಜತೆ ಉನ್ನತಮಟ್ಟದ ಸಭೆ ನಡೆಸಿದ್ದರು. ಇದಾದ ಬಳಿಕ ಎಲ್ಲ ಕುಸ್ತಿಪಟುಗಳು ಮತ್ತೆ ತಮ್ಮ ಕೇಂದ್ರೀಯ ಉದ್ಯೋಗಕ್ಕೆ ಹಾಜರಾಗಿದ್ದರು. ಆದರೆ ಪ್ರತಿಭಟನೆಯಿಂದ ಹಿಂದೆಸರಿಯುವ ಮಾತೆ ಇಲ್ಲ, ನಮ್ಮ ಬೇಡಿಕೆ ಈಡೇರಿಲ್ಲ ಎಂಬುದಾಗಿ ಸಾಕ್ಷಿ ಮಲಿಕ್ ಅವರು ಹೇಳಿಕೆ ಕೊಟ್ಟಿದ್ದರು. ಇದೀಗ ದ್ವಿತೀಯ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಮತ್ತೆ ಕುಸ್ತಿಪಟುಗಳಿಗೆ ಆಹ್ವಾನ ನೀಡಿದೆ.
Delhi | Wrestler Sakshee Malikkh arrives at the residence of Union Sports Minister Anurag Thakur after an invitation from the government for talks with protesting wrestlers pic.twitter.com/iiOKQH5Y8v
— ANI (@ANI) June 7, 2023
ಇದನ್ನೂ ಓದಿ Wrestlers Protest : ಕುಸ್ತಿಪಟುಗಳ ಬಾಯಿ ಮುಚ್ಚಿಸಿದರೇ ಅಮಿತ್ ಶಾ? ಕೆಲಸಕ್ಕೆ ಮರಳಿದ ಸಾಕ್ಷಿ
ಮೇ 28 ರಂದು ಕುಸ್ತಿಪಟುಗಳು ಹೊಸ ಸಂಸತ್ತಿನ ಮುಂದೆ 144 ಸೆಕ್ಷನ್ ಹೇರಿದ್ದರೂ ಸಹ ಮೆರವಣಿಗೆ ಮತ್ತು ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದರು. ಈ ವೇಳೆ ದೆಹಲಿ ಪೊಲೀಸರು ಅತ್ತಯಂತ ಅಮಾನುಷವಾಗಿ ಕುಸ್ತಿಪಟುಗಳನ್ನು ರಸ್ತೆಯಲ್ಲಿ ಎಳೆದಾಡಿ ಬಂಧಿಸಿದ್ದರು. ಪೊಲೀಸರ ಈ ಕ್ರಮಕ್ಕೆ ಎಲ್ಲಡೆ ವಿರೋಧವೂ ವ್ಯಕ್ತವಾಗಿತ್ತು. ಬಳಿಕ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಹರಿದ್ವಾರಕ್ಕೆ ಆಗಮಿಸಿದ್ದರು. ಆದರೆ ಈ ವೇಳೆ ರೈತ ನಾಯಕ ರಾಕೇಶ್ ಟಿಕಾಯತ್ ಅವರು ಮನವೊಲಿಸಿ ಪದಕವನ್ನು ಎಸೆಯದಂತೆ ತಡೆದಿದ್ದರು.