ನವ ದೆಹಲಿ : ಭಾರತೀಯ ಕುಸ್ತಿ ಒಕ್ಕೂಟದ (Wrestling Federation) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಥ್ಲೀಟ್ಗಳು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರನ್ನು ಅಥ್ಲೀಟ್ಗಳು ವಾಪಸ್ ಕಳುಹಿಸಿದ ಪ್ರಸಂಗ ನಡೆಯಿತು. ಗುರುವಾರ ಅವರು ಪ್ರತಿಭಟನೆಗೆ ಹೋದಾಗ ಅಥ್ಲೀಟ್ಗಳು ವೇದಿಕೆಯಿಂದ ಕೆಳಕ್ಕೆ ಇಳಿಸಿದರು. ಇದು ರಾಜಕೀಯ ವೇದಿಕೆಯಲ್ಲ ಎಂಬುದಾಗಿ ಮನದಟ್ಟು ಮಾಡಿದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿನೇಶ್ ಫೋಗಾಟ್ ನೇತೃತ್ವದಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇದಕ್ಕೆ ವ್ಯಾಪಕ ಬೆಂಬಲ ದೊರಕಿದ್ದು, ರಾಜಕೀಯ ನಾಯಕರು ಕೂಡ ಭೇಟಿ ನೀಡಿದ್ದಾರೆ. ಅದೇ ಜಾಗಕ್ಕೆ ಸಿಪಿಎಂ ನಾಯಕಿ ಬೃಂದಾ ಕಾರಟ್ ಭೇಟಿ ನೀಡಿ ಪ್ರತಿಟನಾ ವೇದಿಕೆ ಏರಿದ್ದರು. ತಕ್ಷಣ ಅಲ್ಲಿದ್ದ ಕುಸ್ತಿಪಟುಗಳು ವೇದಿಕೆಯಿಂದ ಕೆಳಕ್ಕೆ ಇಳಿಸಿದರು.
ಪ್ರಕರಣವನ್ನು ರಾಜಕೀಯಗೊಳಿಸಬಾರದು. ದಯವಿಟ್ಟು ವೇದಿಕೆ ಬಿಟ್ಟು ಇಳಿಯಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿ ಸಂಸದರೂ ಆಗಿರುವ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವೂ ಇದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಅವರು ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Vinesh Phogat | ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ವಿನೇಶ್ ಫೋಗಾಟ್‌ಗೆ ಕಂಚು