Site icon Vistara News

Wrestlers Protest: ಬ್ರಿಜ್‌ ಭೂಷಣ್‌ ವಿರುದ್ಧದ ತನಿಖಾ ಸಮಿತಿ; ಕುಸ್ತಿಪಟುಗಳ ಅಸಮಾಧಾನ

Wrestlers Protest

ನವದೆಹಲಿ: ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷರ ಮೇಲಿನ ಆರೋಪಗಳ ತನಿಖೆಗೆ ಮೇಲುಸ್ತುವಾರಿ ಸಮಿತಿಯನ್ನು ಈಗಾಗಲೇ ಕ್ರೀಡಾ ಸಚಿವಾಲಯ ನೇಮಕ ಮಾಡಿದೆ. ಆದರೆ ಇದೀಗ ಸಮಿತಿಯನ್ನು ನೇಮಿಸುವ ಮನ್ನ ಕ್ರೀಡಾ ಸಚಿವಾಲಯವು ತಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಕುಸ್ತಿಪಟುಗಳು(Wrestlers Protest) ಅಸಮಾಧಾನ ಹೊರಹಾಕಿದ್ದಾರೆ.

ಬ್ರಿಜ್‌ ಭೂಷಣ್‌ ಶರಣ್ ಸಿಂಗ್‌ ಅವರ ಮೇಲಿನ ಆರೋಪಗಳ ತನಿಖೆಗೆ ಕ್ರೀಡಾ ಸಚಿವಾಲಯವು ಮಹಿಳಾ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ಸೋಮವಾರ ನೇಮಕ ಮಾಡಿತ್ತು. ಇದೀಗ ಸಮಿತಿಯ ಬಗ್ಗೆ ಕುಸ್ತಿಪಟುಗಳು ಅಸಮಾಧಾನ ಹೊರಹಾಕಿದ್ದಾರೆ.

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್​ ಪೋಗಟ್ ಮತ್ತು ಸಾಕ್ಷಿ ಮಲಿಕ್‌ ಅವರು ಕ್ರೀಡಾ ಸಚಿವಾಲಯದ ಈ ನಿರ್ಧಾರವನ್ನು ಪ್ರಶ್ನಿಸಿ ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮೇಲುಸ್ತುವಾರಿ ಸಮಿತಿ ರಚಿಸುವಾಗ ನಮ್ಮೊಂದಿಗೆ ಸಮಾಲೋಚನೆ ನಡೆಸಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಯಾರೂ ನಮ್ಮ ಅಭಿಪ್ರಾಯ ಕೇಳದಿರುವುದು ಬೇಸರದ ತಂದಿದೆ” ಎಂದು ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ತಾವು ಮಾಡಿರುವ ಟ್ವೀಟ್‌ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರ ಟ್ವಿಟರ್ ಖಾತೆಗೆ ಟ್ಯಾಗ್‌ ಮಾಡಿ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

“ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡಲು ಪ್ರಧಾನಿ ಮಧ್ಯಪ್ರವೇಶಿಸಬೇಕು” ಎಂದು ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಗೀತಾ ಪೋಗಟ್‌ ಮನವಿ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Wrestlers Protest | ಲೈಂಗಿಕ ಕಿರುಕುಳ ಪ್ರಕರಣ; 7 ಸದಸ್ಯರ ತನಿಖಾ ಸಮಿತಿ ರಚಿಸಿದ ಐಒಎ

Exit mobile version