Site icon Vistara News

ಕುಸ್ತಿಪಟುಗಳ ಟೆಂಟ್​ ತೆಗೆದ ಪೊಲೀಸ್​; ಒಬ್ಬರ ಮೇಲೊಬ್ಬರು ಬಿದ್ದ ಫೋಗಟ್​ ಸೋದರಿಯರು, ರಾಷ್ಟ್ರಧ್ವಜಕ್ಕೆ ಅಪಮಾನ

Wrestlers Who Protests In Delhi detained and Their Tent cleared

#image_title

ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರೆಸಿ, ಬ್ರಿಜ್ ಭೂಷಣ್​​ರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು, ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಂಪರು ಪರೀಕ್ಷೆಗೆ ಒಳಪಡಿಸಬೇಕು, ಒಟ್ನಲ್ಲಿ ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್​ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು (Wrestlers protest) ಇಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಅವರು ಜಂತರ್​ಮಂತರ್​ನಲ್ಲಿ, ಧರಣಿ ನಡೆಸಲು ಹಾಕಿಕೊಂಡಿದ್ದ ಟೆಂಟ್​​ಗಳನ್ನು ತೆರವುಗೊಳಿಸಿದ್ದಾರೆ. ಇಂದು ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ.

ತಿಂಗಳುಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ದೆಹಲಿ ಸುತ್ತಲಿನ ರಾಜ್ಯಗಳ ರೈತರು, ವಿವಿಧ ಕ್ಷೇತ್ರದ ಮುಖಂಡರು ಸಾಥ್​ ಕೊಟ್ಟಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆ ದಿನವಾದ ಇಂದು ಪ್ರತಿಭಟನಾಕಾರರೆಲ್ಲ ಸೇರಿ ಮಹಿಳಾ ಸಮ್ಮಾನ್​ ಮಹಾಪಂಚಾಯತ್​ ಹಮ್ಮಿಕೊಂಡಿದ್ದರು. ಅದರ ಭಾಗವಾಗಿ, ರಾಷ್ಟ್ರಧ್ವಜವನ್ನು ಹಿಡಿದು ಹೊಸ ಸಂಸತ್ ಭವನದತ್ತ ಮೆರವಣಿಗೆ ಹೊರಟಿದ್ದರು. ಜಂತರ್​ಮಂತರ್​ ಸುತ್ತ ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳನ್ನು ಅವರು ಜಂಪ್ ಮಾಡಿದ್ದಾರೆ. ಆಗ ಪೊಲೀಸರು ಅವರನ್ನೆಲ್ಲ ತಡೆದಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ​ ಸಂಗೀತಾ ಫೋಗಟ್​​ ಒಬ್ಬರ ಮೇಲೊಬ್ಬರು ಬಿದ್ದರು. ಈ ವೇಳೆ ರಾಷ್ಟ್ರಧ್ವಜವೂ ನೆಲಕ್ಕೆ ಬಿದ್ದ ಫೋಟೋ ವೈರಲ್ ಆಗುತ್ತಿದೆ.

ಕುಸ್ತಿಪಟುಗಳ ಪ್ರತಿಭಟನೆ ಮಿತಿಮೀರಿದ ಬೆನ್ನಲ್ಲೇ ದೆಹಲಿ ಪೊಲೀಸರು ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾದರು. ಮಹಿಳಾ ಪೊಲೀಸರು ಮಹಿಳಾ ಕುಸ್ತಿಪಟುಗಳನ್ನು ಪ್ರತಿಭಟನಾ ಸ್ಥಳದಿಂದ ಎಳೆದು ಬಿಟ್ಟಿದ್ದಾರೆ. ಆದರೂ ಮುಂದೆ ನುಗ್ಗಲು ಯತ್ನಿಸಿ, ಬ್ಯಾರಿಕೇಡ್​ಗಳನ್ನು ಹಾರಿದ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್​, ಬಜರಂಗ್ ಪೂನಿಯಾ ಅವರನ್ನೆಲ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟೆಂಟ್​ಗಳೆನ್ನೆಲ್ಲ ಕಿತ್ತು ಬಿಸಾಕಿದ್ದಾರೆ. ಹೀಗೆ ತಮ್ಮನ್ನೆಲ್ಲ ಪೊಲೀಸರು ಎಳೆದಾಡುತ್ತಿರುವ ವಿಡಿಯೊವನ್ನು ಸಾಕ್ಷಿ ಮಲ್ಲಿಕ್​ ಶೇರ್ ಮಾಡಿಕೊಂಡಿದ್ದಾರೆ. ‘ಚಾಂಪಿಯನ್​ಗಳನ್ನು ನಡೆಸಿಕೊಳ್ಳಲಾಗುತ್ತಿರುವ ರೀತಿ ನೋಡಿ, ಇಡೀ ವಿಶ್ವ ಇಂದು ನಮ್ಮನ್ನ ನೋಡುತ್ತಿದೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಇನ್ನು ಮಹಿಳಾ ಕುಸ್ತಿಪಟುಗಳನ್ನೆಲ್ಲ ಎಳೆದಾಡುತ್ತಿರುವುದು, ಪೊಲೀಸರು ಅವರನ್ನು ಮೈಮುಟ್ಟಿ ನಿಯಂತ್ರಿಸುತ್ತಿರುವುದನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಖಂಡಿಸಿದ್ದಾರೆ. ಅದರಲ್ಲೂ ವಿನೇಶ್ ಮತ್ತು ಸಂಗೀತಾ ಅವರು ಒಬ್ಬರ ಮೇಲೊಬ್ಬರು ಬಿದ್ದಿರುವ ಫೋಟೋ ಹಂಚಿಕೊಂಡ ಅವರು ‘ಈ ಮಹಿಳೆಯರು ವಿದೇಶಿ ನೆಲದಲ್ಲಿ ನಮ್ಮ ರಾಷ್ಟ್ರಧ್ವಜ ಹಾರಿಸಿ ಬಂದವರು. ಆದರೆ ಇಂದು ನಮ್ಮ ನೆಲದಲ್ಲಿ ಇವರನ್ನು, ಅದೇ ರಾಷ್ಟ್ರಧ್ವಜದೊಂದಿಗೆ ಅವಮಾನಿಸಲಾಗುತ್ತಿದೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ.

ಗಾಜಿಯಾಬಾದ್ ಗಡಿಯಲ್ಲಿ ಸೆಕ್ಷನ್​ 144
ಇಂದು ಮಹಿಳಾ ಸಮ್ಮಾನ್ ಮಹಾಪಂಚಾಯತ್​ನಲ್ಲಿ ಪಾಲ್ಗೊಳ್ಳಲು ಹರ್ಯಾಣ ಮತ್ತಿತರ ಕಡೆಗಳಿಂದ ರೈತರು ಆಗಮಿಸುವವರು ಇದ್ದರು. ಆದರೆ ಗಾಜಿಯಾಬಾದ್ ಗಡಿಯಲ್ಲಿ ದೆಹಲಿ ಪೊಲೀಸರು ಸೆಕ್ಷನ್​ 144 ಹೇರಿದ್ದಾರೆ. ಅಷ್ಟೇ ಅಲ್ಲ, ದೆಹಲಿಗೆ ಹೊರಟಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್​ ಮತ್ತಿತರರನ್ನು ಗಡಿಯಲ್ಲೇ ತಡೆದು ವಾಪಸ್ ಕಳಿಸಿದ್ದಾರೆ. ದೆಹಲಿಯ ಟಿಕ್ರಿ ಗಡಿಯಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇಂದು ನೂತನ ಸಂಸತ್ ಭವನದತ್ತ ಜಂಟಿಯಾಗಿ ಪ್ರತಿಭಟನಾ ಮೆರವಣಿಗೆ ಹೋಗಲು ಸಿದ್ಧತೆ ನಡೆಸಿದ್ದ ರೈತರು ಮತ್ತು ಕುಸ್ತಿಪಟುಗಳನ್ನು ಪೊಲೀಸರು ತಡೆದಿದ್ದಾರೆ.

Exit mobile version