ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯಬೇಕಿದ್ದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಟೂರ್ನಿ(Wrestling) ಕಜಕಿಸ್ತಾನದ ಅಸ್ತಾನಾಗೆ ಸ್ಥಳಾಂತರ ಮಾಡಲಾಗಿದೆ. ಈ ವಿಚಾರವನ್ನು ಯುನೈಟೆಡ್ ವಿಶ್ವ ಕುಸ್ತಿ ಒಕ್ಕೂಟ ಖಚಿತಪಡಿಸಿದೆ.
ಭಾರತದ ಕುಸ್ತಿ ಕ್ರೀಡೆಯಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಕಾರಣ ಯುನೈಟೆಡ್ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಈ ಕ್ರಮ ಕೈಗೊಂಡಿದೆ. ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಕೋಚ್ಗಳ ಮೇಲೆ ಭಾರತದ ಸ್ಟಾರ್ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಸೇರಿ ಅನೇಕರು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿ ಪ್ರತಿಭಟನೆ ಮಾಡಿದ್ದರು. ಸದ್ಯ ಈ ಪ್ರಕರಣ ತನಿಖೆಯ ಹಂತದಲ್ಲಿದೆ. ಹೀಗಾಗಿ ಟೂರ್ನಿಯನ್ನು ಭಾರತದಿಂದ ಸ್ಥಳಾಂತರ ಮಾಡಲಾಗಿದೆ ಎಂದು ಯುನೈಟೆಡ್ ವಿಶ್ವ ಕುಸ್ತಿ ಒಕ್ಕೂಟ ತಿಳಿಸಿದೆ.
ಏಷ್ಯನ್ ಚಾಂಪಿಯನ್‌ಶಿಪ್ ಕುಸ್ತಿ ಟೂರ್ನಿ(Asian Championships) ಮಾರ್ಚ್ 28ರಿಂದ ಏಪ್ರಿಲ್ 2ರವರೆಗೆ ದೆಹಲಿಯಲ್ಲಿ ನಿಗದಿಯಾಗಿತ್ತು. ಆದರೆ ಇದೀಗ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಕಜಕಿಸ್ತಾನದ ಅಸ್ತಾನಾದಲ್ಲಿ ಎಪ್ರಿಲ್ 7ರಿಂದ 15ರವರೆಗೆ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ.