Site icon Vistara News

Wrestling: ಪ್ರಮುಖ ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಕುಸ್ತಿ ಪಟುಗಳ ವರ್ತನೆಗೆ ಕ್ರೀಡಾ ಸಚಿವಾಲಯ ಬೇಸರ

Wrestlers Protest

ನವದೆಹಲಿ: ಭಾರತೀಯ ಕುಸ್ತಿ(Wrestling) ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸಿ ಅಂತಾರಾಷ್ಟ್ರೀಯ ಕೂಟಗಳಿಂದ ಹೊರಗುಳಿದಿರುವ ಖ್ಯಾತ ಕುಸ್ತಿಪಟುಗಳ ಈ ವರ್ತನೆಗೆ ಕ್ರೀಡಾ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್​ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಅನೇಕ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದ್ದರು. ಬ್ರಿಜ್ ಭೂಷಣ್ ಶರಣ್ ಸಿಂಗ್​ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದರು. ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿ ಸಮಿತಿಯನ್ನು ರಚಿಸಿದ ಬಳಿಕ ಕುಸ್ತಿಪಟುಗಳು ತಮ್ಮ ಧರಣಿ ಕೈಬಿಟ್ಟಿದ್ದರು. ಆದರೆ ಪ್ರಮುಖ ಟೂರ್ನಿಗೆ ವೈಯಕ್ತಿಕ ಕಾರಣ ನೀಡಿ ಗೈರಾಗುತ್ತಿದ್ದಾರೆ.

ಇದೀಗ ಕುಸ್ತಿಪಟುಗಳ ಈ ವರ್ತನೆಗೆ ಕ್ರೀಡಾ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕುಸ್ತಿಪಟುಗಳಿಗೆ ತರಬೇತಿ ಮತ್ತು ಕ್ರೀಡೆಗಳಿಗೆ ತಯಾರಿ ನಡೆಸಲು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ ಅಡಿಯಲ್ಲಿ ಸರ್ಕಾರ ಹಣಕಾಸು ನೆರವು ನೀಡುತ್ತಿದೆ. ಆದರೆ ಕುಸ್ತಿಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳದೆ ಕಾಲಾಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದೆ.

ಇದನ್ನೂ ಓದಿ Wrestling: ಏಷ್ಯನ್ ಚಾಂಪಿಯನ್‌ಶಿಪ್​; ಭಾರತದಿಂದ ಕಜಕಿಸ್ತಾನಕ್ಕೆ ಸ್ಥಳಾಂತರ

ಮುಂದಿನ ವರ್ಷ ಒಲಿಂಪಿಕ್ಸ್​ ಕ್ರೀಡಾಕೂಟ ಇದೆ. ಈ ದೃಷ್ಟಿಯಲ್ಲಿ ಎಲ್ಲ ಕುಸ್ತಿಪಟುಗಳು ಮುಂದೆ ಬರಲಿರುವ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕು. ಈಗಾಗಲೇ ಕುಸ್ತಿ ಪಟುಗಳ ಬೇಡಿಕೆಯಂತೆ ಬ್ರಿಜ್ ಭೂಷಣ್ ಅವರ ವಿರುದ್ಧ ತನಿಖೆಗೆ ಸಮಿತಿಯನ್ನು ರಚಿಸಲಾಗಿದೆ. ಹೀಗಿದ್ದರೂ ಅವರು ಏಕೆ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Exit mobile version