ಅಹಮದಾಬಾದ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಉಭಯ ತಂಡಗಳ ಈ ಕಾದಾಟ ಜೂನ್ 7 ರಿಂದ ಇಂಗ್ಲೆಂಡ್‌ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಇದೀಗ ಈ ಪಂದ್ಯಕ್ಕೆ ಮುನ್ನವೇ ಆಸೀಸ್ ಆಟಗಾರ ಸ್ಟೀವನ್ ಸ್ಮಿತ್(Steven Smith) ಟೀಮ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕುರಿತು ಸಂದರ್ಶನವೊಂದಲ್ಲಿ ಮಾತನಾಡಿದ ಸ್ಮಿತ್, ಇಂಗ್ಲೆಂಡ್ ವಾತಾವರಣ ಹಾಗೂ ಆಸ್ಟ್ರೇಲಿಯಾ ವಾತಾವರಣ ಸರಿಸುಮಾರು ಒಂದೇ ರೀತಿ ಇದೆ. ಇಲ್ಲಿ ಆಸೀಸ್ನಂತೆಯೇ ವೇಗದ ಪಿಚ್ ಇರುವ ಕಾರಣ ಇದು ನಮಗೆ ನೆರವಾಗಬಹುದು ಎಂದು ಹೇಳಿದ್ದಾರೆ.
ಮೊದಲ ಆವೃತ್ತಿಯ ಟೆಸ್ಟ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಸೋಲು ಕಾಣಲು ಪ್ರಮುಖ ಕಾರಣ ವೇಗದ ಪಿಚ್. ಏಕೆಂದರೆ ನ್ಯೂಜಿಲ್ಯಾಂಡ್ನಲ್ಲಿಯೂ ವೇಗದ ಪಿಚ್ ಇದೆ. ಹೀಗಾಗಿ ಇಂಗ್ಲೆಂಡ್ ವಾತಾವರಣಕ್ಕೆ ಕಿವೀಸ್ ಆಟಗಾರರಿಗೆ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಯಿತು. ಇದೇ ಲಾಭ ಆಸ್ಟ್ರೇಲಿಯಾ ತಂಡಕ್ಕೂ ಇದೆ ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ IND VS AUS: ಡಬ್ಲ್ಯುಟಿಸಿ ಫೈನಲ್ ಸವಾಲಿನಿಂದ ಕೂಡಿರಲಿದೆ; ರಾಹುಲ್ ದ್ರಾವಿಡ್
ಇಂಗ್ಲೆಂಡ್ನಲ್ಲಿ ಆ್ಯಶಸ್ ಸರಣಿ ಆಡಿದ ಕಾರಣದಿಂದ ಇಲ್ಲಿನ ಎಲ್ಲ ಪಿಚ್ಗಳ ಅನುಭವ ಆಸೀಸ್ ಆಟಗಾರರಿಗಿದೆ. ಈ ಎಲ್ಲ ಅನುಭವವೂ ಕೂಡ ಆಸ್ಟ್ರೇಲಿಯಾಕ್ಕೆ ನೆರವಾಗಲಿದೆ. ಹೀಗಾಗಿ ಭಾರತದ ಸವಾಲನ್ನು ಸಮರ್ಥವಾಗಿ ಎದುರಿಸಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಸ್ಮಿತ್ ಹೇಳಿದರು. ಆದರೆ ಫೈನಲ್ನಲ್ಲಿ ಅದೃಷ್ಟ ಯಾರ ಪಾಲಿಗಿದೆ ಎಂದು ಕಾದುನೋಡಬೇಕಿದೆ.