ಮುಂಬಯಿ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್(Shreyas Iyer) ಬೆನ್ನು ನೋವಿನ ಸಮಸ್ಯೆಯಿಂದಾಗಿ ಈಗಾಗಲೇ ಐಪಿಎಲ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್(WTC Final 2023) ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಹಿರಿಯ ಆಟಗಾರ ಅಜಿಂಕ್ಯ ರಹಾನೆ(Ajinkya Rahane) ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಆದರೂ ಸುಧಾರಿಸಿಕೊಳ್ಳದ ಕಾರಣ ಶಸ್ತ್ರ ಚಿಕಿತ್ಸೆ ಮೊರೆ ಹೋಗಲು ನಿರ್ಧರಿಸಿದ್ದಾರೆ. ಸದ್ಯ ಅವರು ಸುಧಾರಿಸಿಕೊಳ್ಳುವುದಕ್ಕೆ 5 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಅವರು ಐಪಿಎಲ್ನಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಜತೆಗೆ ಮೂರು ತಿಂಗಳ ಒಳಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿರುವ ಕಾರಣ ಇದಕ್ಕೂ ಅಲಭ್ಯರಾಗಿದ್ದಾರೆ. ಇದೀಗ ಅವರ ಬದಲು ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಆರಂಭದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ ಸದ್ಯ ಅವರು ಕಳಪೆ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಜತೆಗೆ ವಿದೇಶದಲ್ಲಿ ಅಷ್ಟಾಗಿ ಆಡಿದ ಅನುಭವ ಕೂಡ ಹೊಂದಿಲ್ಲ. ಆದ್ದರಿಂದ ಅನುಭವಿಯಾದ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ರಹಾನೆ ಕಳೆದ ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ದ್ವಿಶತಕ ಬಾರಿಸಿ ಮಿಂಚಿದ್ದರು. ಇನ್ನು ಇಂಗ್ಲೆಂಡ್ನಲ್ಲಿಯೂ ಅವರು ಉತ್ತಮ ಟೆಸ್ಟ್ ರೆಕಾರ್ಡ್ ಹೊಂದಿದ್ದಾರೆ. ಹೀಗಾಗಿ ಅವರು ಒತ್ತಮ ಆಯ್ಕೆ ಎಂದು ತಿಳಿದುಬಂದಿದೆ.
ಇಂಗ್ಲೆಂಡ್ನಲ್ಲಿ ಈ ಫೈನಲ್ ಪಂದ್ಯ ನಡೆದರೂ ಆಸ್ಟ್ರೇಲಿಯಾ ವಿರುದ್ಧ ಅಜಿಂಕ್ಯ ರಹಾನೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಕಳೆದ ಬಾರಿಯ ಆಸೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದ ಅವರು ಭಾರತಕ್ಕೆ ಸರಣಿ ಗೆದ್ದು ಕೊಟ್ಟಿದ್ದರು. ಜತೆಗೆ ಈ ಸರಣಿಯಲ್ಲಿ ಒಂದು ಶತಕವನ್ನು ಬಾರಿಸಿ ಮಿಂಚಿದ್ದರು. ಸದ್ಯ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.