ಲಂಡನ್: ಪ್ರತಿಷ್ಠಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇತ್ತಂಡಗಳ ಈ ಪ್ರಶಸ್ತಿ ಸಮರ ಬುಧವಾರದಿಂದ(ಜೂನ್ 7) ಆರಂಭಗೊಳ್ಳಲಿದೆ. ಈ ಪಂದ್ಯದಕ್ಕಾಗಿ ಉಭಯ ತಂಡಗಳು ಭರ್ಜರಿ ಅಭ್ಯಾಸ ನಡೆಸುತ್ತಿವೆ. ಆದರೆ ಪಂದ್ಯಕ್ಕೂ ಮುನ್ನವೇ ಆಸೀಸ್ ಆಟಗಾರರು ಎದುರಾಳಿ ಆಟಗಾರರನ್ನು ಕುಗ್ಗಿಸುವ ಕೆಲಸ ಆರಂಭಿಸಿದ್ದಾರೆ.
ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಯನ್ನು ಗುಣಗಾಣ ಮಾಡುವ ಮೂಲಕ ಆಸೀಸ್ ಆಟಗಾರರು ಮೈಂಡ್ಗೇಮ್ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಸಿಸಿ ಬಿಡುಗಡೆ ಮಾಡಿರುವ ವಿಡಿಯೊವೊಂದರಲ್ಲಿ ಆಸೀಸ್ ಆಟಗಾರರು ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ಅವರಿಗೆ ಸರಿಸಾಟಿಯಾಗುವ ಆಟಗಾರ ಯಾರು ಇಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಕೊಹ್ಲಿಯನ್ನು ಭಾರತದ ಗಂಡುಗಲಿ, ಭಾರತ ತಂಡವನ್ನು ದಶಕಗಳಿಂದ ಯಶಸ್ವಿಯಾಗಿ ಮುನ್ನಡೆಸಿದ ವ್ಯಕ್ತಿ ಎಂದು ಎಂದು ಬಣ್ಣಿಸಿದ್ದಾರೆ. ಎಡಗೈ ಆಟಗಾರ ಡೇವಿಡ್ ವಾರ್ನರ್ ಅವರು ವಿರಾಟ್ ಅವರ ಕವರ್ ಡ್ರೈವ್ ಅದ್ಭುತ. ಈ ಹೊಡೆತವನ್ನು ನೋಡುವುದೇ ಕಣ್ಣಿಗೆ ಖುಷಿ ಎಂದರು.
ಇದನ್ನೂ ಓದಿ WTC Final 2023: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಡ್ರಾ ಗೊಂಡರೆ ಫಲಿತಾಂಶ ನಿರ್ಣಯ ಹೇಗೆ? ಇಲ್ಲಿದೆ ಮಾಹಿತಿ
ಉಸ್ಮಾನ್ ಖವಾಜಾ ಅವರು ಕಿಂಗ್ ಕೊಹ್ಲಿ ಓರ್ವ ಸ್ಪರ್ಧಾತ್ಮಕ ಆಟಗಾರ ಎಂದಿದ್ದಾರೆ. ತಂಡದ ನಾಯಕ ಪ್ಯಾಟ್ ಕಮಿನ್ಸ್, ಕೊಹ್ಲಿಯನ್ನು ಉತ್ತಮ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಆಟಗಾರ ಎಂದು ಹೇಳಿದ್ದಾರೆ. ತಂಡದ ಉಪನಾಯಕನಾಗಿರುವ ಸ್ಟೀವನ್ ಸ್ಮಿತ್, ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಎಂದು ಕರೆದಿದ್ದಾರೆ. ಒಟ್ಟಾರೆ ಇದು ಕೊಹ್ಲಿಯನ್ನು ಅಟ್ಟಕೇರಿಸಿ ಅವರನ್ನು ಕಟ್ಟಿಹಾಕುವ ಪ್ರಯತ್ನವಾಗಿದೆ. ಆಸೀಸ್ ಆಟಗಾರರು ಪ್ರಮುಖ ಪಂದ್ಯಗಳ ವೇಳೆ ಈ ರೀತಿ ಎದುರಾಳಿಗಳನ್ನು ಮೈಂಟ್ಗೇಮ್ ಮೂಲಕ ಕೆಡವಲು ಪ್ರಯತ್ನಿಸುತ್ತಾರೆ ಆದರೆ ಈ ಬಲೆಗೆ ಬೀಳದಂತೆ ಆಟಗಾರರು ಎಚ್ಚರಿಕೆ ವಹಿಸುವುದು ಅತ್ಯಗತ್ಯ.