ಸಿಡ್ನಿ: ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(World Test Championship Final) ಪಂದ್ಯ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಇದೀಗ ಈ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಜತೆಗೆ ಇದೇ ತಂಡ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದೆ.
ಭಾರತ ವಿರುದ್ಧದ ಕಳೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ತನ್ನ ತಾಯಿಯ ನಿಧನದಿಂದಾಗಿ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಪ್ಯಾಟ್ ಕಮಿನ್ಸ್ ಮತ್ತೆ ತಂಡಕ್ಕೆ ಆಗಮಿಸಿ ನಾಯಕತ್ವ ವಹಿಸಿಕೊಂಡಿದ್ದಾರೆ. ಸ್ವೀವನ್ ಸ್ಮಿತ್ ಉಪನಾಯಕನಾಗಿದ್ದಾರೆ. ಇನ್ನು ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಕಳಪೆ ಫಾರ್ಮ್ ಮತ್ತು ಗಾಯದಿಂದ ಹೊರಬಿದ್ದ ಡೇವಿಡ್ ವಾರ್ನರ್(David Warner) ಅವರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಗಾಯದಿಂದ ಗುಣಮುಖರಾಗಿರುವ ಮಿಚೆಲ್ ಮಾರ್ಷ್(Mitchell Marsh) ಅವರು 2019 ಬಳಿಕ ಇದೇ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ WTC Final 2023: ಟೆಸ್ಟ್ ವಿಶ್ವಕಪ್ ಫೈನಲ್ಗೆ ಅಜಿಂಕ್ಯ ರಹಾನೆ; ವರದಿ
ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್ವುಡ್ ಹಾಗೂ ಸ್ಕಾಟ್ ಬೋಲೆಂಡ್ ವೇಗದ ಬೌಲರ್‌ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಯುವ ಸ್ಪಿನ್ನರ್ ಟಾಡ್ ಮರ್ಫಿಗೂ ಅವಕಾಶ ನೀಡಲಾಗಿದೆ. ಆದರೆ ಭಾರತ ಇನ್ನೂ ಗಾಯದ ಚಿಂತೆಯಲ್ಲಿರುವ ಕಾರಣ ತಂಡ ಪ್ರಕಟಿಸಿಲ್ಲ.
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೊಲೆಂಡ್, ಅಲೆಕ್ಸ್ ಕೇರಿ, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಝಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜ, ಮಾರ್ನಸ್ ಲಾಬುಶೇನ್, ನಥಾನ್ ಲಿಯೋನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮ್ಯಾಟ್ ರೆನ್‌ಶಾ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.