ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯದ ಮೂರನೇ ದಿನದಾಟ ಅಂತ್ಯಗೊಂಡಿದೆ. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿ ಒಟ್ಟು 296 ರನ್ಗಳ ಮುನ್ನಡೆಯೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ಗೆ 151 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ಮೊದಲ ಓವರ್ನಲ್ಲಿಯೇ ಭರತ್ ಅವರ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಈ ವೇಳೆ ಜತೆಯಾದ ಶಾರ್ದೂಲ್ ಠಾಕೂರ್(Shardul Thakur) ಮತ್ತು ಅಜಿಂಕ್ಯ ರಹಾನೆ(Ajinkya Rahane) ಆಸೀಸ್ ಬೌಲಿಂಗ್ ದಾಳಿಗೆ ತಡೆಯೊಡ್ಡಿ 7ನೇ ವಿಕೆಟ್ಗೆ 109 ರನ್ ಒಟ್ಟುಗೂಡಿಸಿ ತಂಡಕ್ಕೆ ಆಸರೆಯಾದರು. ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು. ಉಭಯ ಆಟಗಾರರ ಈ ಬ್ಯಾಟಿಂಗ್ ಸಾಹಸದಿಂದ ಮೊದಲ ಇನಿಂಗ್ಸ್ನಲ್ಲಿ 296 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 173 ರನ್ಗಳ ಹಿನ್ನಡೆ ಎದುರಿಸಿತು.
ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿ ಮಿಂಚಿದ ಟ್ರಾವಿಸ್ ಹೆಡ್ ಮತ್ತು ಸ್ವೀವನ್ ಸ್ಮಿತ್ ಅವರು ದ್ವಿತೀಯ ಇನಿಂಗ್ಸ್ನಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಉಭಯ ಆಟಗಾರರಿಬ್ಬರ ವಿಕೆಟ್ ರವೀಂದ್ರ ಜಡೇಜಾ ಕಿತ್ತರು. ಸ್ಮಿತ್ 34 ರನ್ ಗಳಿಸಿದರೆ, ಹೆಡ್ 18 ರನ್ ಗಳಿಸಿದರು. ವಾರ್ನರ್ ಒಂದಂಕಿಗೆ ಸೀಮತರಾದರು. ಮೊದಲ ಇನಿಂಗ್ಸ್ನಲ್ಲಿ ಖಾತೆ ತೆರೆಯುವಲ್ಲಿ ವಿಫಲರಾಗಿದ್ದ ಉಸ್ಮಾನ್ ಖಾವಾಜ 13 ರನ್ ಗಳಿಸಿ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ಮೊದಲ ಇನಿಂಗ್ಸ್ನಲ್ಲಿಯೂ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ದರು. ಸದ್ಯ ಕ್ರೀಸ್ ಆಕ್ರಮಿಸಿಕೊಂಡಿರುವ ಕ್ಯಾಮರೂನ್ ಗ್ರೀನ್ 7 ಮತ್ತು ಮಾರ್ನಸ್ ಲಬುಶೇನ್ 41 ರನ್ ಗಳಿಸಿ ಬ್ಯಾಟಿಂಗ್ ಯಾದ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಪರ ಅಜಿಂಕ್ಯ ರಹಾನೆ 129 ಬಾಲ್ ಎದುರಿಸಿ 11 ಬೌಂಡರಿ ಮತ್ತು 1 ಸಿಕ್ಸ್ ಬಾರಿಸಿ 89 ರನ್ಗೆ ವಿಕೆಟ್ ಒಪ್ಪಿಸಿದರು. 70 ರನ್ ಗಳಿಸಿದ ವೇಳೆ ಅವರು ತಮ್ಮ ಟೆಸ್ಟ್ ಬಾಳ್ವೆಯಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಿದರು. ಈ ಮೂಲಕ ಐದು ಸಾವಿರ ರನ್ ಪೂರೈಸಿದ ಭಾರತದ 13ನೇ ಆಟಗಾರನಾಗಿ ಮೂಡಿಬಂದರು. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯೊಂದನ್ನು ಬರೆದರು.
ಇದನ್ನೂ ಓದಿ WTC Final 2023: ಬಾಲ್ ಟ್ಯಾಂಪರಿಂಗ್ ನಡೆಸಿದರೇ ಆಸೀಸ್ ಆಟಗಾರರು; ಕ್ಯಾಮೆರಾಗೆ ಸೆರೆಸಿಕ್ಕ ದೃಶ್ಯದಲ್ಲೇನಿದೆ?
ರಹಾನೆಗೆ ಉತ್ತಮ ಸಾಥ್ ನೀಡಿದ ಶಾರ್ದೂಲ್ ಠಾಕೂರ್ ಅವರು ಕೈಗೆ ಹಲವು ಬಾರಿ ಚೆಂಡಿನ ಏಟು ತಿಂದರೂ ನೋವನ್ನು ಸಹಿಸಿಕೊಂಡು ಅರ್ಧಶತಕ ಬಾರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾದರು. 109 ಎಸೆತ ಎದುರಿಸಿದ ಅವರು 6 ಬೌಂಡರಿ ನೆರವಿನಿಂದ 51 ರನ್ ಗಳಿಸಿದರು. ಇದು ಅವರು ಓವೆಲ್ನಲ್ಲಿ ಗಳಿಸಿದ ಮೂರನೇ ಅರ್ಧಶತಕ ಮತ್ತು ವೈಯಕ್ತಿಕ ನಾಲ್ಕನೇ ಅರ್ಧಶತಕವಾಗಿದೆ.