ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಬುಧವಾರದಿಂದ ಆರಂಭಗೊಳ್ಳಲಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಈ ಬಾರಿ ಕಪ್ ಗೆಲ್ಲುವ ಮೂಲಕ ಹಲವು ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸಲಿದೆ ಎಂದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡ್ರಾವಿಡ್, ಮಹತ್ವದ ಪಂದ್ಯಕ್ಕೆ ಭಾರತ ಕಳೆದ ಎರಡು ವರ್ಷಗಳಿಂದ ಶ್ರಮಪಟ್ಟಿದೆ. ನಾವು ಕಳೆದ 12 ವರ್ಷಗಳಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆಲ್ಲದಿರಬಹುದು. ಆದರೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಬೇಕಾದ ಎಲ್ಲ ಸಿದ್ಧತೆ ಮತ್ತು ಕಾರ್ಯ ತಂತ್ರಗಳನ್ನು ರೂಪಿಸಿದ್ದೇವೆ. ಇದು ಈ ಬಾರಿ ನಮಗೆ ನೆರವಾಗಲಿದೆ” ಎಂದು ಹೇಳಿದರು.
ಗೆಲುವೊಂದೇ ನಮ್ಮ ಗುರಿ
2021 ರಲ್ಲಿ ಕಿವೀಸ್ ವಿರುದ್ಧ ನಡೆದ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಾವು ಪ್ರಶಸ್ತಿ ಗೆಲ್ಲಲು ಎಡವಿದೆವು. ಬಳಿಕ ಆಡಿದ ಟಿ20 ವಿಶ್ವಕಪ್ ಟೂರ್ನಿಯ ನಾಕ್‌ಔಟ್ ಹಂತದಲ್ಲೇ ಸೋಲು ಕಂಡೆವು. ಈ ಎಲ್ಲ ಸೋಲು ನಮ್ಮಲ್ಲಿ ಪ್ರಶಸ್ತಿಯ ಹಸಿವನ್ನು ಹೆಚ್ಚಿಸಿದೆ. ತಂಡ ಯಾವುದೇ ಒತ್ತಡಕ್ಕೆ ಸಿಲುಕದೆ ಉತ್ತಮ ಪ್ರದರ್ಶನ ತೋರುವ ಎಲ್ಲ ವಿಶ್ವಾಸವಿದೆ. ಈ ಬಾರಿ ಗೆಲುವೊಂದೇ ನಮ್ಮ ಗುರಿಯಾಗಿದೆ ಎಂದರು.
ರಹಾನೆ ಕಮ್ಬ್ಯಾಕ್
ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರು 18 ತಿಂಗಳುಗಳ ಬಳಿಕ ಮೊದಲ ಬಾರಿ ಟೆಸ್ಟ್ ಆಡುತ್ತಿದ್ದಾರೆ. ಆಟದಲ್ಲಿನ ವೈಫಲ್ಯವು ವೃತ್ತಿಜೀವನವನ್ನು ಕೊನೆಗೊಳಿಸಬಹುದು. ಈಗ ತಂಡಕ್ಕೆ ಅವರು ಮರಳಿದ್ದಾರೆ. ಅವರ ಆಗಮನದಿಂದ ತಂಡಕ್ಕೆ ಹೆಚ್ಚು ಬಲ ಬಂದಿದೆ. ಐಪಿಎಲ್ನಲ್ಲಿ ಅವರು ತೋರಿದ ಬ್ಯಾಟಿಂಗ್ ಪ್ರದರ್ಶನ ಇಲ್ಲಿಯೂ ಮುಂದುವರಿಯುವ ವಿಶ್ವಾಸವಿದೆ. ಇಂಗ್ಲೆಂಡ್ನಲ್ಲಿಯೂ ರಹಾನೆ ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದಾರೆ. ರಹಾನೆ ಬಳಿ ಇನ್ನೂ ದೇಶಕ್ಕಾಗಿ ಆಡುವ ಸಾಮರ್ಥ್ಯವಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ WTC Final 2023 : ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸುವ ಸೂಚನೆ ನೀಡಿದ ರೋಹಿತ್ ಶರ್ಮಾ
ಚೇತೇಶ್ವರ್ ಪೂಜಾರ ಬಗ್ಗೆಯೂ ದ್ರಾವಿಡ್ ಈ ಪಂದ್ಯದಲ್ಲಿ ಹೆಚ್ಚಿನ ಬರವಸೆ ಇರಿಸಿರುವುದಾಗಿ ತಿಳಿಸಿದರು. ಇಂಗ್ಲೆಂಡ್ ನೆಲದಲ್ಲಿ ಕೌಂಟಿ ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ತೋರಿದ್ದಾರೆ. ಇಲ್ಲಿನ ವಾತಾವರಣಕ್ಕೆ ಅವರು ಒಗ್ಗಿಕೊಂಡಿದ್ದಾರೆ. ಹೀಗಾಗಿ ಅವರು ಉತ್ತಮ ಪ್ರದರ್ಶನ ತೋರುವ ನಂಬಿಕೆ ಇದೆ ಎಂದರು.