ಲಂಡನ್: ಮಹತ್ವದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ತಂಡಗಳು ಹೇಗಿರಲಿದೆ? ಓವಲ್ ಪಿಚ್ ಬ್ಯಾಟಿಂಗ್ಗೆ ನೆರವು ನೀಡಲಿದೆಯಾ ಅಥವಾ ಬೌಲಿಂಗ್ ಸ್ನೇಹಿಯೇ? ಎಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲವೊಂದು ಮೂಡಿದೆ. ಇದಕ್ಕೆ ಕಾರಣ 140 ವರ್ಷಗಳ ಇತಿಹಾಸವುಳ್ಳ ಲಂಡನ್‌ನ ಓವಲ್ ಸ್ಟೇಡಿಯಂನಲ್ಲಿ ಜೂನ್ ತಿಂಗಳಲ್ಲಿ ಟೆಸ್ಟ್ ಪಂದ್ಯವೊಂದು ನಡೆಯುತ್ತಿರುವುದು ಇದೇ ಮೊದಲು. ಹೀಗಾಗಿ ಈ ಬಾರಿ ಪಿಚ್ ವರ್ತನೆಯನ್ನು ಸ್ಪಷ್ಟವಾಗಿ ಊಹಿಸಲು ಸಾಧ್ಯವಿಲ್ಲ ಎಂಬುದು ಇಲ್ಲಿನ ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ.
ಸಾಮಾನ್ಯವಾಗಿ ಈ ಸ್ಟೇಡಿಯಂನಲ್ಲಿ ಯಾವುದೇ ಪ್ರವಾಸಿ ತಂಡಗಳಿಗೆ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿಸುವುದು ವಾಡಿಕೆಯಾಗಿದೆ. ಇದು ಕೂಡ ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಪಂದ್ಯ ನಡೆಯುತ್ತದೆ. ಏಕೆಂದರೆ ಆಗ ಇಲ್ಲಿನ ಪಿಚ್ ಸಂಪೂರ್ಣ ಒಣಗಿರುತ್ತದೆ. ನಿಧಾನ ಗತಿಯ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಜತೆಯೆ ಅಪಾಯಕಾರಿಯಾದ ವರ್ತನೆಯೂ ಕಂಡು ಬರುವುದಿಲ್ಲ. ಆದರೆ ಈ ಬಾರಿ ಪಂದ್ಯ ಆಗಸ್ಟ್ ನಲ್ಲಿ ನಡೆಯುತ್ತಿದೆ.
ಸದ್ಯದ ಪ್ರಕಾರ ಹಸಿರು ಹೊದಿಕೆಯೆಯಿಂದ ಕೂಡಿದ ಈ ಪಿಚ್ ಸ್ಪಿನ್ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಇನ್ನೊಂದು ವಿಚಾರವೆಂದರೆ ಇಂಗ್ಲೆಂಡ್ನಲ್ಲಿ ಸ್ಪಿನ್ಗೆ ನೆರವು ನೀಡುವ ಏಕೈಕ ಪಿಚ್ ಕೂಡ ಇದಾಗಿದೆ. ಹೀಗಾಗಿ ಸ್ಪಿನ್ ನಡೆಯಬಹುದೆಂಬುದು ಸದ್ಯದ ಲೆಕ್ಕಾಚಾರ. ಇದೇ ಕಾರಣಕ್ಕೆ ಇತ್ತಂಡಗಳು ತಂಡದಲ್ಲಿ ಎರಡು ಸ್ಪಿನ್ನರ್ಗಳನ್ನು ಆಡಿಸುವ ಸಾಧ್ಯತೆ ಇದೆ. ಎರಡು ಸ್ಪಿನ್ನರ್ಗಳು ಅವಕಾಶ ಪಡೆದರೆ ಭಾರತ ತಂಡದಲ್ಲಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆಡಬಹುದು.
ಇದನ್ನೂ ಓದಿ WTC Final 2023: ಓವಲ್ ಮೈದಾನದಲ್ಲಿ ಭಾರತ, ಆಸ್ಟ್ರೇಲಿಯಾ ತಂಡಗಳ ಟೆಸ್ಟ್ ಇತಿಹಾಸ ಹೇಗಿದೆ? ಇಲ್ಲಿದೆ ಮಾಹಿತಿ
ಸಂಭಾವ್ಯ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಟಾಡ್ ಮರ್ಫಿ,ಮೈಕೆಲ್ ನೇಸರ್/ಸ್ಕಾಟ್ ಬೋಲ್ಯಾಂಡ್.