Site icon Vistara News

WTC Final 2023: ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಡ್ರಾ ಗೊಂಡರೆ ಫಲಿತಾಂಶ ನಿರ್ಣಯ ಹೇಗೆ? ಇಲ್ಲಿದೆ ಮಾಹಿತಿ

Kennington Oval, London

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿನ್​ಶಿಪ್​ ಫೈನಲ್​ ಪಂದ್ಯ ಆರಂಭಗೊಳ್ಳಲು ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಇದೀಗ ಈ ಪಂದ್ಯ ಡ್ರಾ ಗೊಂಡರೆ ಫಲಿತಾಂಶ ನಿರ್ಧಾರ ಹೇಗೆ ಎಂಬ ಕುತೂಹಲವೊಂದು ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡಲಾರಂಭಿಸಿದೆ. ಇದಕ್ಕೆ ಉತ್ತರ ಇಲ್ಲಿದೆ.

ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ಈ ಮಹತ್ವದ ಪಂದ್ಯ ಜೂನ್​ 7ರಿಂದ ಲಂಡನ್​ನ ಓವಲ್​ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕಾಗಿ ಇತ್ತಂಡಗಳು ಕಠಿನ ಅಭ್ಯಾಸದಲ್ಲಿ ನಿರತವಾಗಿದೆ. ಇದರ ಮಧ್ಯೆ ಪಂದ್ಯ ಡ್ರಾ ಗೊಂಡರೆ ಏನು ಗತಿ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಂದೊಮ್ಮೆ ಈ ಪಂದ್ಯಕ್ಕೆ ಮಳೆಯಿಂದಾಗಿ 5 ದಿನಗಳ ಆಟ ಅಡಚಣೆಯಾದರೆ ಆಗ ಜೂನ್​ 12 ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ. ಮಳೆ ಬಾರದೆ ಪಂದ್ಯ 5 ದಿನಗಳ ತನಕ ಸಾಗಿಯೂ ಡ್ರಾ ಗೊಂಡರೆ ಆಗ ಉಭಯ ತಂಡಗಳನ್ನು ಜಂಟಿಯಾಗಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ.

ಈ ಟೆಸ್ಟ್‌ ಪಂದ್ಯವನ್ನು ಯಾರೇ ಗೆದ್ದರೂ ಇತಿಹಾಸವೊಂದು ಸೃಷ್ಟಿಯಾಗಲಿದೆ. ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯ ತಂಡಗಳೆರಡೂ ಏಕದಿನ ವಿಶ್ವಕಪ್‌ ಹಾಗೂ ಟಿ20 ವಿಶ್ವಕಪ್‌ ಗೆದ್ದಿವೆ. ಹೀಗಾಗಿ ಟೆಸ್ಟ್‌ ವಿಶ್ವಕಪ್‌ ಗೆದ್ದರೆ ಈ ಮೂರು ಮಾದರಿಯ ವಿಶ್ವ ಕಪ್​ ಗೆದ್ದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಈ ತಂಡ ಯಾವುದು ಎಂಬುದು ಈ ಪಂದ್ಯದ ಕುತೂಹಲವಾಗಿದೆ.

ಈ ಪಂದ್ಯ ಆರಂಭಕ್ಕೂ ಮುನ್ನವೇ ಆಸ್ಟೇಲಿಯಾ ತಂಡಕ್ಕೆ ದೊಡ್ಡ ಹಿನ್ನಡೆಯೊಂದು ಸಂಭವಿಸಿದೆ. ತಂಡದ ಸ್ಟಾರ್​ ಬೌಲರ್​ ಜೋಶ್​ ಹ್ಯಾಜಲ್​ವುಡ್​ ಅವರು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ಬದಲು ಮೈಕೆಲ್​ ನೇಸರ್​ ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಅವರು ಆಡುವ ಬಳಗದಲ್ಲಿ ಅವಕಾಶ ಪಡೆಯಲಿದ್ದಾರಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ WTC Final : ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯುವ ಸಾಮರ್ಥ್ಯ ನಮಗಿದೆ; ಟೀಮ್ ಇಂಡಿಯಾ ನಾಯಕನ ವಿಶ್ವಾಸ

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್). ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಮೈಕೆಲ್​ ನೇಸರ್​. ಮೀಸಲು ಆಟಗಾರರು: ಮಿಚೆಲ್ ಮಾರ್ಷ್, ಮ್ಯಾಥ್ಯೂ ರೆನ್ಶಾ

Exit mobile version