ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನಾಡಲು ಈಗಾಗಲೇ ಭಾರತದ ಮೊದಲ ಬ್ಯಾಚ್ ಲಂಡನ್ ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಇದೀಗ ದ್ವಿತೀಯ ಬ್ಯಾಚ್ನಲ್ಲಿ ತಂಡದ ನಾಯಕ ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್,ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರು ಲಂಡನ್ ತಲುಪಿದ್ದು ಟೀಮ್ ಇಂಡಿಯಾ ಕ್ಯಾಂಪ್ ಕೂಡಿಕೊಂಡಿದ್ದಾರೆ.
ಭಾನುವಾರ ಮುಂಬಯಿಯಿಂದ ಲಂಡನ್ಗೆ ರೋಹಿತ್ ಶರ್ಮ ಜತೆ ಪ್ರಯಾಣ ಬೇಳೆಸಿರುವ ಫೋಟೊವನ್ನು ಜೈಸ್ವಾಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಓವಲ್ ಕದನಕ್ಕೆ ರೆಡಿ ಎಂದು ಬರೆದುಕೊಂಡಿದ್ದರು. ಸದ್ಯ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಅಜಿಂಕ್ಯ ರಹಾನೆ, ಶುಭಮನ್ ಗಿಲ್ ಮತ್ತು ಶ್ರೀಕರ್ ಭರತ್ ಮಾತ್ರ ಭಾರದಲ್ಲಿಯೇ ಉಳಿದುಕೊಂಡಿದ್ದಾರೆ. ಇವರು ಐಪಿಎಲ್ ಮುಗಿದ ತಕ್ಷಣ ಲಂಡನ್ಗೆ ವಿಮಾನ ಏರಲಿದ್ದಾರೆ. ಈ ಎಲ್ಲ ಆಟಗಾರರು ಭಾನುವಾರವೇ ಲಂಡನ್ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಮಳೆಯಿಂದಾಗಿ ಫೈನಲ್ ಮುಂದೂಡಿಕೆಯಾದ ಕಾರಣ ಇವರು ಭಾರತದಲ್ಲಿಯೇ ಉಳಿಯಬೇಕಾಯಿತು. ಸೋಮವಾರ ನಡೆಯುವ ಫೈನಲ್ ಬಳಿಕ ಅಂದರೆ ಮಂಗಳವಾರ ಇವರೆಲ್ಲ ಅಂತಿಮ ಹಂತದಲ್ಲಿ ಲಂಡನ್ಗೆ ತೆರಳಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಸಮರ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ.
ಸ್ಟ್ಯಾಂಡ್ ಬೈ ಆಟಗಾರರಾಗಿ ಅವಕಾಶ ಪಡೆದಿದ್ದ ಋತುರಾಜ್ ಗಾಯಕ್ವಾಡ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನಲೆ ಅವರು ಫೈನಲ್ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಅವರ ಬದಲು ಮುಂಬೈ ರಣಜಿ ತಂಡದ ಯು ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.
ಇದನ್ನೂ ಓದಿ WTC Final 2023: ವಿಶ್ವ ಟೆಸ್ಟ್ ಫೈನಲ್ಗೆ ಯಶಸ್ವಿ ಜೈಸ್ವಾಲ್; ಗಾಯಕ್ವಾಡ್ ಔಟ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್ದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್). ಸ್ಟ್ಯಾಂಡ್ ಬೈ ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.