ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ, ಟೀಮ್ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ ಅವರಿಗೆ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯೊಂದನ್ನು ಮುರಿಯುವ ಅವಕಾಶವಿದೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಸಮರ ಬುಧವಾರ ಲಂಡನ್ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಪೂಜಾರ ಅವರು ನೂರಕ್ಕಿಂತ ಅಧಿಕ ಮೊತ್ತ ಪೇರಿಸಿದ್ದಲ್ಲಿ ದ್ರಾವಿಡ್ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮರಿಯಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್(3630) ಮತ್ತು ವಿವಿಎಸ್ ಲಕ್ಷ್ಮಣ್(2434) ಅವರು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಕಾಣಿಸಿಕೊಂಡಿದ್ದಾರೆ ಅವರು ಆಸೀಸ್ ವಿರುದ್ಧ 32 ಟೆಸ್ಟ್ ಪಂದ್ಯ ಆಡಿದ್ದು 60 ಇನಿಂಗ್ಸ್‌ಗಳಲ್ಲಿ 2143 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 13 ಅರ್ಧ ಶತಕಗಳು ಸೇರಿವೆ. ಇದೀಗ ಈ ದಾಖಲೆಯನ್ನು ಮುರಿಯುವ ಅವಕಾಶ ಪೂಜಾರ ಮತ್ತು ಕೊಹ್ಲಿಗೆ ಇದೆ.
ಇದನ್ನೂ ಓದಿ WTC Final 2023: ಟ್ರೋಫಿ ಗೆಲ್ಲುವ ವಿಶ್ವಾಸವಿದೆ; ಕೋಚ್ ರಾಹುಲ್ ದ್ರಾವಿಡ್
ಈ ಪಂದ್ಯದಲ್ಲಿ ಪೂಜಾರ ಅವರು ಎರಡೂ ಇನಿಂಗ್ಸ್ ಸೇರಿ 110 ರನ್ ಕಲೆಹಾಕಿದರೆ ದ್ರಾವಿಡ್ ದಾಖಲೆ ಪತನಗೊಳ್ಳಲಿದೆ. ಸದ್ಯ ಪೂಜಾರ ಆಸೀಸ್ ವಿರುದ್ಧ 24 ಟೆಸ್ಟ್ ಪಂದ್ಯ ಆಡಿ 2033 ರನ್ ಬಾರಿಸಿದ್ದಾರೆ. ಅತ್ತ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್ ಆಡಿ 1979 ರನ್ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಅವರು 164 ರನ್ ಬಾರಿಸಿದರೆ ಗುರು ದ್ರಾವಿಡ್ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.