ಬೆಂಗಳೂರು: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಯುವ ಆಟಗಾರ ರಿಷಭ್ ಪಂತ್(Rishabh Pant) ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಆಡುತ್ತಿರುವ ಭಾರತ ತಂಡಕ್ಕೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ.
ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಂಡಿರುವ ಪಂತ್ ಸದ್ಯ ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಪ್ರಸಕ್ತ ಸಾಗುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಫೈನಲ್ ಪಂದ್ಯದ ಕುರಿತು ಭಾರತ್ ಆರ್ಮಿ ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿರುವ ಅಭಿಮಾನಿಯೊಬ್ಬರು, “ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಪಂತ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಪಂತ್ ಇರುತ್ತಿದ್ದರೆ ಭಾರತ ತಂಡಕ್ಕೆ ಯಾವುದೇ ಚಿಂತೆ ಇರುತ್ತಿರಲಿಲ್ಲ” ಎಂದು ಹೇಳಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಂತ್ ಅವರು “ನಂಬಿಕೆ ಇಟ್ಟುಕೊಳ್ಳಿ” ಭಾರತ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
2021ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪಂತ್ ಅಮೋಘ ಪ್ರದರ್ಶನ ತೋರುವ ಮೂಲಕ ಸೋಲುವ ಪಂದ್ಯವನ್ನೂ ಗೆಲ್ಲಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಭಾರತ ತಂಡಕ್ಕೆ ನೆರವಾಗಿದ್ದರು. ಸದ್ಯ ಯಾವುದೇ ಊರುಗೋಲಿನ ಸಹಾಯವಿಲ್ಲದೆ ನಡೆದಾಡುತ್ತಿರುವ ಪಂತ್ ಮುಂದಿನ ವರ್ಷಾರಂಭದಲ್ಲಿ ಕ್ರಿಕೆಟ್ಗೆ ಮರಳುವ ಸಾಧ್ಯತೆ ಇದೆ.
ಇದನ್ನೂ ಓದಿ WTC Final 2023: ವಿಶ್ವ ಟೆಸ್ಟ್ನ ಅಂತಿಮ ದಿನ; ಯಾರಿಗೆ ಒಲಿಯಲಿದೆ ಚಾಂಪಿಯನ್ ಪಟ್ಟ
ಕಳೆದ ವರ್ಷ ಡಿಸೆಂಬರ್ 30 ರಂದು ದೆಹಲಿಯಿಂದ ಪಂತ್ ಅವರು ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು.