ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯ ಬುಧವಾರ ಲಂಡನ್ ನ ಓವಲ್ ಮೈದಾನದಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕಾಗಿ ಇತ್ತಂಡಗಳು ಈಗಾಗಲೇ ಕಠಿಣ ಅಭ್ಯಾಸ ನಡೆಸಿ ಕಾರ್ಯತಂತ್ರಗಳನ್ನು ರೂಪಿಸುವ ಮೂಲಕ ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆಯೇ? ಎಂಬ ಅನುಮಾನವೊಂದು ಕ್ರಿಕೆಟ್ ಅಭಿಮಾನಿಗಳಿಗೆ ಕಾಡಲಾರಂಭಿಸಿದೆ. ಈ ಎಲ್ಲ ಗೊಂದಲಕ್ಕೆ ಉತ್ತರ ಇಲ್ಲಿದೆ.
ಸದ್ಯ ಲಂಡನ್‌ನ ಓವಲ್ನಲ್ಲಿ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಷ್ಟೇ ಕಂಡುಬಂದಿದೆ. ಇದುವರೆಗೂ ಇಲ್ಲಿ ಯಾವುದೇ ಮಳೆಯಾಗಿಲ್ಲ. ಆದರೆ ಜೂನ್ 10ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 10 ಎಂದರೆ ಪಂದ್ಯದ ಮೂರನೇ ದಿನವಾಗಲಿದೆ. ಒಂದೊಮ್ಮೆ ಮಳೆ ಬಂದರೂ ಒಂದು ದಿನ ಮೀಸಲು ದಿನ ಇರುವ ಕಾರಣ ಇಲ್ಲಿ ನಷ್ಟವಾದ ಆಟವನ್ನು ಈ ಮೀಸಲು ದಿನದಲ್ಲಿ ಸರಿದೂಗಿಸಬಹುದು.
ಒಂದೊಮ್ಮೆ ಮಳೆಯಿಂದ ಪಂದ್ಯಕ್ಕೆ ಸ್ಪಷ್ಟ ಫಲಿತಾಂಶ ಬಾರದೇ ಹೋದರೆ, ಅಥವಾ ಪಂದ್ಯ ಡ್ರಾ ಗೊಂಡರೆ ಆಗ ಉಭಯ ತಂಡಗಳನ್ನು ಜಂಟಿ ವಿಜೇತರಾನ್ನಾಗಿ ಘೋಷಣೆ ಮಾಡಲಾಗುತ್ತದೆ. ಮಳೆ ಬಾರದಿದ್ದರೂ ಇಲ್ಲಿ ಶೀತ ವಾತಾವರಣವಂತೂ ಇದ್ದೇ ಇರಲಿದೆ. ಹೀಗಾಗಿ ಇದು ಸ್ಪಿನ್ ಬೌಲಿಂಗ್ಗೆ ಹೆಚ್ಚಿನ ನೆರವು ನೀಡಲಿದೆ.
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್). ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.
ಇದನ್ನೂ ಓದಿ WTC Final 2023: ಧೋನಿಯಿಂದ ಕೀಪಿಂಗ್ ಸಲಹೆ ಪಡೆದ ಶ್ರೀಕರ್ ಭರತ್
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಮೈಕೆಲ್ ನೇಸರ್. ಮೀಸಲು ಆಟಗಾರರು: ಮಿಚೆಲ್ ಮಾರ್ಷ್, ಮ್ಯಾಥ್ಯೂ ರೆನ್ಶಾ