ಲಂಡನ್: ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರು 87 ವರ್ಷಗಳ ಹಿಂದಿನ ಜತೆಯಾಟದ ದಾಖಲೆಯೊಂದನ್ನು ಮುರಿದಿದ್ದಾರೆ.
ಲಂಡನ್‌ನ ಐತಿಹಾಸಿಕ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 469 ರನ್ ಗಳಿಸಿ ಸವಾಲೊಡ್ಡಿದೆ. ದ್ವಿತೀಯ ದಿನವಾದ ಗುರುವಾರ ಆಟ ಮುಂದುವರಿಸಿದ ವೇಳೆ ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರು ದಾಖಲೆಯ ಜತೆಯಾಟವೊಂದನ್ನು ನಿರ್ಮಿಸಿದರು. ಈ ಮೂಲಕ 87 ವರ್ಷಗಳ ಹಿಂದಿನ ದಾಖಲೆಯೊಂದು ಪತನಗೊಂಡಿತು. ಉಭಯ ಆಟಗಾರರು ನಾಲ್ಕನೇ ವಿಕೆಟ್‌ಗೆ ಓವಲ್ ಮೈದಾನದಲ್ಲಿ ಅತ್ಯಧಿಕ ಜತೆಯಾಟ ನಡೆಸಿದ ಆಟಗಾರರಾಗಿ ಮೂಡಿಬಂದರು.
ಈ ಜೋಡಿ 285 ರನ್‌ಗಳ ಬೃಹತ್ ಜತೆಯಾಟ ನಡೆಸಿ 1936ರಲ್ಲಿ ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ ಮತ್ತು ಸ್ಟಾನ್ ವಾರ್ಥಿಂಗ್‌ಟನ್ ಅವರು ನಾಲ್ಕನೇ ವಿಕೆಟ್‌ಗೆ ಭಾರತದ ವಿರುದ್ಧವೇ 266 ರನ್‌ಗಳ ಜತೆಯಾಟ ನಡೆಸಿದ ದಾಖಲೆಯನ್ನು ಮುರಿದರು. ಮೊದಲ ದಿನದಾಟದಲ್ಲಿ ಸ್ಮಿತ್ ಮತ್ತು ಹೆಡ್ ಜೋಡಿ 4ನೇ ವಿಕೆಟಿಗೆ 370 ಎಸೆತಗಳಿಂದ 251 ರನ್ ಗಳಿಸಿತ್ತು.
ಇದನ್ನೂ ಓದಿ WTC Final 2023: ವಿಶ್ವ ಟೆಸ್ಟ್ ಫೈನಲ್ನಲ್ಲಿ ಪಾಂಡ್ಯಗೆ ಅವಕಾಶ ಲಭಿಸಿತ್ತು ಆದರೆ…
ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ ಮತ್ತು ಸ್ಟಾನ್ ವಾರ್ಥಿಂಗ್‌ಟನ್ ಅವರು ಈ ದಾಖಲೆ ನಿರ್ಮಿಸುವ ಮೊದಲು ಇದೇ ಮೈದಾನದಲ್ಲಿ ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ ಮತ್ತು ಆರ್ಚೀ ಜಾಕ್ಸನ್ ಜೋಡಿ 1930ರಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ವಿಕೆಟ್ 243 ರನ್ ಗಳಿಸಿದ್ದರು.
ಇನ್ನು ಈ ಪಂದ್ಯದಲ್ಲಿ 174 ಎಸೆತ ಎದುರಿಸಿದ ಟ್ರಾವಿಸ್ ಹೆಡ್ ಅವರು 163 ರನ್ಗಳಿಸಿದರು. ಈ ಇನಿಂಗ್ಸ್ನಲ್ಲಿ 25 ಬೌಂಡರಿ ಮತ್ತು ಒಂದು ಸಿಕ್ಸರ್ ದಾಖಲಾಯಿತು. ಸ್ಟೀವನ್ ಸ್ಮಿತ್ ಅವರು 19 ಬೌಂಡರಿ ನೆರವಿನಿಂದ 121 ರನ್ ಸಿಡಿಸಿದರು. ಇದು ಸ್ಮಿತ್ ಅವರ 31ನೇ ಟೆಸ್ಟ್ ಶತಕವಾಗಿದೆ. ಹಾಗೇಯೇ ಹೆಡ್ ಅವರ 6ನೇ ಶತಕ ಇದಾಗಿದೆ. ಹೆಡ್ ಅವರು ಶತಕ ಬಾರಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.