ಲಂಡನ್: ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ವಿಕೆಟ್ ಕೀಪರ್-ಬ್ಯಾಟರ್ ಶ್ರೀಕರ್ ಭರತ್ ಅವರು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿ ಕೀಪಿಂಗ್ ಸಲಹೆಯನ್ನು ಪಡೆದಿರುವುದಾಗಿ ತಿಳಿಸಿದ್ದಾರೆ.
ಮಹತ್ವದ ಪಂದ್ಯದ ತಯಾರಿ ಬಗ್ಗೆ ಮಾತನಾಡುವ ವೇಳೆ ಭರತ್ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ಧೋನಿ ಅವರು ಕೀಪಿಂಗ್ ಕೌಶಲ್ಯದ ಬಗ್ಗೆ ಹಲವು ಉಪಯುಕ್ತ ಸಲಹೆ ಮತ್ತು ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ. ಇದು ಈ ಪಂದ್ಯದಲ್ಲಿ ನೆರವಿಗೆ ಬರುವ ವಿಶ್ವಾಸವಿದೆ ಎಂದು ಹೇಳಿದರು.
ಮೊಣಕಾಲಿನ ಗಾಯದಿಂದ ಬಳಲುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಕಳೆದ ಗುರುವಾರ ಮುಂಬಯಿಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿ ಚೇತರಿಕೆ ಕಾಣುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಚೆನ್ನೈ ತಂಡ ಈ ಬಾರಿಯ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದನ್ನೂ ಓದಿ WTC Final 2023: ದ್ರಾವಿಡ್ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ಪೂಜಾರ; ಏನದು?
ರಿಷಭ್ ಪಂತ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡ ಕಾರಣ ಅವರ ಬದಲಿಗೆ ಭರತ್ ಅವರು ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 29 ವರ್ಷದ ಅವರು ಇದುವರೆಗೆ ಭಾರತ ಪರ ನಾಲ್ಕು ಟೆಸ್ಟ್‌ಗಳನ್ನು ಆಡಿದ್ದಾರೆ. ಕಳೆದ ಆಸೀಸ್ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅವರು ಟೀಮ್ ಇಂಡಿಯಾಕ್ಕೆ ಪಪಾರ್ಪಣೆ ಮಾಡಿದ್ದರು. ಆಡಿದ 4 ಪಂದ್ಯದಲ್ಲಿ 101 ರನ್ ಗಳಿಸಿದ್ದಾರೆ. ಇದರಲ್ಲಿ 44 ರನ್ ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್). ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.