Site icon Vistara News

WTC FInal 2023 : ಫೈನಲ್​ ಪಂದ್ಯಕ್ಕೆ ಗವಾಸ್ಕರ್ ಆಯ್ಕೆ ಮಾಡಿಕೊಂಡ ಟೀಮ್​ನಲ್ಲಿ ಯಾರಿಗುಂಟು ಚಾನ್ಸ್​​?

Sunil Gavaskar

#image_title

ಮುಂಬಯಿ: ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ 2023ರ ಫೈನಲ್​ (WTC FInal 2023) ಪಂದ್ಯಕ್ಕೆ ಸಿದ್ಧತೆಗಳು ಪ್ರಾರಂಭವಾಗಿದೆ. ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಟೆಸ್ಟ್ ಪಂದ್ಯಗಳ ವಿಶ್ವ ಕಪ್​ ಗೆಲ್ಲುವುದಕ್ಕೆ ಸಜ್ಜಾಗಿವೆ. ಜೂನ್ 7ರಂದು ಲಂಡನ್​​ ದಿ ಓವಲ್​ ಸ್ಟೇಡಿಯಮ್​ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ರೋಹಿತ್ ಶರ್ಮಾ(Rohit Sharma) ನೇತೃತ್ವದ ಭಾರತ ತಂಡವು ಹಿಂದಿನ ಆವೃತ್ತಿಯ ಫೈನಲ್ ಸೋಲಿಗೆ ಸಮಾಧಾನ ಹೇಳಿಕೊಳ್ಳುವ ಉದ್ದೇಶ ಹೊಂದಿದ್ದರೆ, ಆಸ್ಟ್ರೇಲಿಯಾ ತನ್ನ ಚೊಚ್ಚಲ ಡಬ್ಲ್ಯುಟಿಸಿ ಟ್ರೋಫಿ ಎತ್ತಲು ಎದುರು ನೋಡುತ್ತಿದೆ.

ಪ್ರತಿಷ್ಠಿತ ಹಣಾಹಣಿಗೆ ಎರಡೂ ದೇಶಗಳು ಬಲಿಷ್ಠ ತಂಡವನ್ನು ಹೆಸರಿಸಿವೆ. ಆದರೆ ಕೆಲವು ಪ್ರಮುಖ ಆಟಗಾರರು ಗಾಯಗಳಿಂದಾಗಿ ಹೊರಗುಳಿಯಬೇಕಾಗಿರುವುದರಿಂದ ಭಾರತದ ಪಾಲಿಗೆ ಹಿನ್ನಡೆ ಉಂಟಾಗಿದೆ. 2022ರ ಡಿಸೆಂಬರ್​ನಲ್ಲಿ ನಡೆದ ಭೀಕರ ಕಾರು ಅಪಘಾತದ ಬಳಿಕ ವಿಕೆಟ್​ಕೀಪರ್ ಬ್ಯಾಟರ್​ ರಿಷಭ್ ಪಂತ್ ಪುನಶ್ಚೇತನಕ್ಕೆ ಒಳಗಾಗಿರುವ ಕಾರಣ ಅವರು ಲಭ್ಯವಿಲ್ಲ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಸರ್ಜರಿ ನಡೆಸಿಕೊಂಡಿರುವ ಕಾರಣ ಅವರು ತಂಡದಲ್ಲಿ ಸ್ಥಾನ ಪಡೆದಿಲ್ಲ.

ಅವರೆಲ್ಲರ ಗೈರು ಹಾಜರಿಯ ನಡುವೆಯೂ ಅತ್ಯುತ್ತಮ ಪ್ಲೇಯಿಂಗ್​ ಇಲೆವೆನ್​ಸಂಯೋಜನೆಯ ಬಗ್ಗೆ ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಂತೆಯೇ ಭಾರತದ ಮಾಜಿ ನಾಯಕ ಮತ್ತು ಆಟದ ದಂತಕಥೆ ಸುನಿಲ್ ಗವಾಸ್ಕರ್ ಅವರು ಫೈನಲ್​ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್​​ ಫಾಲೋ ದಿ ಬ್ಲೂಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಸ್ಕರ್ ಅವರು ತಂಡದ ಸಂಭಾವ್ಯ ಆಟಗಾರರ ಬಗ್ಗೆ ನುಡಿದಿದ್ದಾರೆ.

ಬ್ಯಾಟಿಂಗ್ ಬಗ್ಗೆ ಮಾತನಾಡುವುದಾದರೆ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಒಂದು ಮತ್ತು ಎರಡನೇ ಕ್ರಮಾಂಕದಲ್ಲಿ ಆಡಲಿದ್ದಾರೆ. 3ನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, 5ನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಇರಬೇಕು. 6ರಲ್ಲಿ ಯಾರು ಎಂಬುದೇ ಗೊಂದಲ. ಶ್ರೀಕರ್ ಭರತ್ ಅಥವಾ ಇಶಾನ್ ಕಿಶನ್ ನಡುವೆ ಪೈಪೋಟಿ ಇದೆ. ಆದರೆ, ನನಗೆ ಭರತ್ ಉತ್ತಮ ಎಂದೆನಿಸಿದೆ. ಅವರೇ ಅಂತಿಯ ಆಯ್ಕೆ ಎಂದುಕೊಂಡಿದ್ದೇ ಎಂದು ಗವಾಸ್ಕರ್ ಹೇಳಿದ್ದಾರೆ.

ರಿಷಭ್ ಪಂತ್ ಅವರು ಅಪಘಾತಕ್ಕೆ ಒಳಗಾದ ನಂತರ ವಿಕೆಟ್ ಕೀಪರ್​ ಸ್ಥಾನಕ್ಕೆ ಯಾರು ಎಂಬ ಗೊಂದಲ ಟೀಮ್ ಇಂಡಿಯಾದಲ್ಲಿದೆ. ಇಂಗ್ಲೆಂಡ್​​ಗೆ ಕೆ. ಎಲ್​ ರಾಹುಲ್ ​ಸೂಕ್ತ ಎಂದು ಹೇಳಿದ್ದರೂ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಭರತ್​ಗೆ ಗ್ಲವ್ಸ್​ ತೊಡಿಸಲಿದೆ ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​. ವಿಕೆಟ್​ ಕೀಪಿಂಗ್​​ಗೆ ಭಾರತದ ಎರಡನೇ ಆಯ್ಕೆ ಇಶಾನ್ ಕಿಶನ್. ದೀರ್ಘ ಅವಧಿಯ ಕ್ರಿಕೆಟ್​ಗೆ ಅವರು ಪದಾರ್ಪಣೆ ಮಾಡಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಆಡಿರುವ ಭರತ್​​ಗೆ ಅವಕಾಶ ಸಿಗಬಹುದು ಎನ್ನಲಾಗಿದೆ.

“7ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಇರಲಿದ್ದಾರೆ. ನಂತರದ ಸ್ಥಾನ ಅಶ್ವಿನ್ ಅವರದ್ದು. 9, 10 ಮತ್ತು 11ನೇ ಕ್ರಮಾಂಕದಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಇರುತ್ತಾರೆ ಎಂಬುದಾಗಿ ಗವಾಸ್ಕರ್​ ನುಡಿದಿದ್ದಾರೆ.

ಗವಾಸ್ಕರ್ ಆಯ್ಕೆ ಮಾಡಿಕೊಂಡ ಪ್ಲೇಯಿಂಗ್ ಇಲೆವೆನ್​

ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಶ್ರೀಕರ್ ಭರತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

Exit mobile version