ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡ ಇನಿಂಗ್ಸ್ ಹಿನ್ನಡೆಯ ಭಯದಲ್ಲಿದೆ. ಆಸ್ಟ್ರೇಲಿಯಾ ಬಾರಿಸಿದ 469 ರನ್ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟುತ್ತಿರುವ ಭಾರತ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯದ ಪರಿಸ್ಥಿತಿ ಗಮನಿಸುವಾಗ ಭಾರತ ತಂಡ 200 ರನ್ಗಳ ಗಡಿ ದಾಟುವುದೂ ಕಷ್ಟಕರ ಎಂಬಂತಿದೆ. ಭಾರತ ಇನ್ನೂ 318 ರನ್ಗಳನ್ನು ಬಾರಿಸಬೇಕಿದೆ.
ಮೊದಲ ದಿನದಾಟದ ಅಂತ್ಯಕ್ಕೆ 85 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದ್ದ ಆಸ್ಟ್ರೇಲಿಯಾ, ದ್ವಿತೀಯ ದಿನದಾಟದಲ್ಲಿ 142 ರನ್ ಕಲೆ ಹಾಕುವ ಮೂಲಕ ಮೊದಲ ಇನಿಂಗ್ಸ್ನಲ್ಲಿ 469ರನ್ಗೆ ಆಲೌಟ್ ಆಯಿತು. ಸ್ಟೀವನ್ ಸ್ಮಿತ್ ಅವರ ಶತಕದ ಆಟ ದ್ವಿತೀಯ ದಿನದ ಪ್ರಮುಖ ಹೈಲೆಟ್ ಆಗಿತ್ತು. ಭಾರತ ಪರ ಮೊಹಮ್ಮದ್ ಸಿರಾಜ್ ಅವರು ಒಟ್ಟು ನಾಲ್ಕು ವಿಕೆಟ್ ಕಿತ್ತು ಮಿಂಚಿದರು.
ನಾಟಕೀಯ ಕುಸಿತ ಕಂಡ ಭಾರತ
ದೊಡ್ಡ ಮೊತ್ತವನ್ನು ಕಂಡು ಆರಂಭದಲ್ಲೇ ಬೆದರಿದ ಭಾರತದ ಬ್ಯಾಟರ್ಗಳು ಸತತವಾಗಿ ವಿಕೆಟ್ ಕೈಚೆಲ್ಲಿದರು. ಅದರಲ್ಲೂ ಶುಭಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಅವರು ಅತ್ಯಂತ ಕೆಟ್ಟ ರೀತಿಯಲ್ಲಿ ವಿಕೆಟ್ ಕೈಚೆಲ್ಲಿದರು. ವಿಕೆಟ್ಗೆ ಬರುವ ಚೆಂಡಿಗೆ ಬ್ಯಾಟ್ ಬೀಸುವ ಬದಲು ಬ್ಯಾಟ್ ಎತ್ತಿ ಈ ಚೆಂಡನ್ನು ಬಿಡುವ ಮೂಲಕ ಕ್ಲೀನ್ ಬೌಲ್ಡ್ ಆದರು. ಇದನ್ನು ಕಂಡ ಕ್ರಿಕೆಟ್ ಪಂಡಿತರು ಗಿಲ್ ಮತ್ತು ಪೂಜಾರ ವಿರುದ್ಧ ಕಿಡಿಕಾರಿದ್ದಾರೆ. ಇದು ಅತ್ಯಂತ ಕೆಟ್ಟ ರೀತಿಯ ಬ್ಯಾಟಿಂಗ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ WTC Final 2023: ಪಂತ್ ದಾಖಲೆ ಮುರಿದ ಟ್ರಾವಿಸ್ ಹೆಡ್
ರೋಹಿತ್ ಶರ್ಮ, ವಿರಾಟ್ ಕೊಹ್ಲಿಯೂ ಕೂಡ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ರವೀಂದ್ರ ಜಡಜೇ ಅವರು ಕೆಲ ಕಾಲ ದಿಟ್ಟ ರೀತಿಯ ಬ್ಯಾಟಿಂಗ್ ಪ್ರದರ್ಶನ ತೋರಿದರೂ 48 ರನ್ ಗಳಿಸಿದ್ದ ವೇಳೆ ನಥಾನ್ ಲಿಯೋನ್ ಅವರ ಮೊದಲ ಓವರ್ನಲ್ಲಿಯೇ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಸದ್ಯ ಅಜಿಂಕ್ಯ ರಹಾನೆ 29* ಮತ್ತು ಶ್ರೀಕರ್ ಭರತ್ 5* ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನವಾದ ಶುಕ್ರವಾರ ಉಭಯ ಆಟಗಾರರು ದೊಡ್ಡ ಮೊತ್ತದ ಇನಿಂಗ್ಸ್ ಕಟ್ಟಿದರೆ ಮಾತ್ರ ಭಾರತ ಈ ಪಂದ್ಯವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆಸೀಸ್ ಪರ ಬೌಲಿಂಗ್ ನಡೆಸಿದ ಐದೂ ಬೌಲರ್ಗಳು ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.