ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯ ರೋಚಕ ಘಟ್ಟ ತಲುಪಿದೆ. ಮೂರು ದಿನಗಳ ಆಟ ಯಶಸ್ವಿಯಾಗಿ ನಡೆದಿದ್ದು ಶನಿವಾರ ನಾಲ್ಕನೇ ದಿನದಾಟ ಆರಂಭಗೊಳ್ಳಬೇಕಿದೆ. ಆದರೆ ಇದೀಗ ನಿರ್ಣಾಯಕ ಅಂತಿಮ ಎರಡು ದಿನಗಳ ಆಟ ನಡೆಯುವುದು ಅನುಮಾನ ಎನ್ನಲಾಗಿದೆ. ಇದಕ್ಕೆ ಕಾರಣ ಇಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಈ ಟೆಸ್ಟ್ ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನವೇ ಹವಾಮಾನ ಇಲಾಖೆ ಮೂರು ದಿನಗಳ ಆಟ ಸಾಗಿದರೂ ಅಂತಿಮ ಎರಡು ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಅದರಂತೆ ನಾಲ್ಕನೇ ದಿನ ಶನಿವಾರದಂದು ಲಂಡನ್ನ ಓವಲ್(Kennington Oval) ಪ್ರದೇಶದಲ್ಲಿ ವಿಪರೀತ ಗಾಳಿ ಮತ್ತು ಮೋಡ ಕವಿದ ವಾತಾವರಣ ಕಂಡುಬಂದಿದೆ. ಇಲ್ಲಿನ ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಸಣ್ಣ ಪ್ರಮಾಣದ ಮಳೆಯೂ ಬಂದಿರುವುದಾಗಿ ತಿಳಿದುಬಂದಿದೆ.
ಸದ್ಯ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ. ಒಟ್ಟಾರೆ 296 ರನ್ಗಳ ಮುನ್ನಡೆ ಸಾಧಿಸಿದೆ. ಒಂದೊಮ್ಮೆ ಈ ಪಂದ್ಯ ಮಳೆಯಿಂದ ರದ್ದಾದರೆ, ಮೀಸಲು ದಿನದಲ್ಲಿಯೂ ಮಳೆ ಈ ಪಂದ್ಯಕ್ಕೆ ಅನುವು ಮಾಡಿಕೊಡದಿದ್ದರೆ ಆಗ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ.
Rain predicted on Day 4 & Day 5 in WTC final. pic.twitter.com/DsoPOhJLIK
— Johns. (@CricCrazyJohns) June 9, 2023
ಇದನ್ನೂ ಓದಿ WTC Final 2023: ಬೃಹತ್ ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ; ಸಂಕಷ್ಟದಲ್ಲಿ ರೋಹಿತ್ ಪಡೆ
ದೊಡ್ಡ ರನ್ ಅಂತರದ ಹಿನ್ನಡೆಯಲ್ಲಿರುವ ಭಾರತಕ್ಕೆ ಮಳೆ ಬಂದರೆ ಅದೃಷ್ಟವೊಂದು ಕುಲಾಯಿಸಿದಂತಾಗುತ್ತದೆ. ಜಂಟಿಯಾಗಿ ಇಲ್ಲಿ ವಿಜೇತರಾದರೂ ಉಭಯ ತಂಡಗಳು ವಿಶ್ವ ಕ್ರಿಕೆಟ್ನಲ್ಲಿ ನೂತನ ದಾಖಲೆಯೊಂದನ್ನು ಬರೆಯಲಿದೆ. ಮೂರು ಮಾದರಿಯ ವಿಶ್ವ ಕಪ್ ಟ್ರೋಫಿ ಗೆದ್ದ ವಿಶ್ವದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಲಿದೆ.