ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯದಲ್ಲಿ ಮೊದಲ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಟ್ರಾವಿಸ್ ಹೆಡ್ ಅವರು ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ಸೇರ್ಪಡೆಗೊಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಭಾರತ ವಿರುದ್ಧ ನಡೆಯುತ್ತಿಯುವ ಈ ವಿಶ್ವ ಟೆಸ್ಟ್ ಪ್ರಶಸ್ತಿ ಸಮರದಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದ ಹೆಡ್ ಅವರು 163 ರನ್ ಗಳಿಸಿ ಮಿಂಚಿದರು. ಈ ಮೂಲಕ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದರು. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯದಲ್ಲಿ ಅತಿ ಹೆಚ್ಚಿನ ಸ್ಟ್ರೇಕ್ ರೇಟ್ ಸಂಪಾದಿಸಿದ ಸಾಧನೆ ಮಾಡಿದರು. ಅವರು 81.91 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ರಿಷಭ್ ಪಂತ್ ಹೆಸರಿನಲ್ಲಿದ್ದ ದಾಖಲೆ ಪತನಗೊಂಡಿತು. ಪಂತ್ 80.81 ಸ್ಟ್ರೇಕ್ ರೇಟ್ ಹೊಂದಿದ್ದರು. ಇದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ದಾಖಲಾಗಿದ್ದ ಇದುವರೆಗಿನ ಗರಿಷ್ಠ ಸ್ಟ್ರೈಕ್ ರೇಟ್ ಆಗಿತ್ತು. ಆದರೆ ಈ ದಾಖಲೆ ಇದೀಗ ಪತನಗೊಂಡಿದೆ.
ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ಪರಿಣಾಮ ಪಂತ್ ಅವರು ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಸದ್ಯ ಉತ್ತಮ ಚೇತರಿಕೆ ಕಂಡಿರುವ ಅವರು ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ವರ್ಷ ಅವರು ಕ್ರಿಕೆಟ್ ಅಂಗಳಕ್ಕೆ ಮರಳುವ ಎಲ್ಲ ಸಾಧ್ಯತೆ ಇದೆ.
WTC 2021-23ರಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್‌ಗಳು
ಟ್ರಾವಿಸ್ ಹೆಡ್ – 81.91
ರಿಷಭ್ ಪಂತ್ – 80.81
ಜಾನಿ ಬೈರ್‌ಸ್ಟೋ – 68.90
ಓಲಿ ಪೋಪ್ – 66.04
ಇದನ್ನೂ ಓದಿ WTC Final 2023: ವಿಶೇಷ ದಾಖಲೆ ಬರೆದ ಮೊಹಮ್ಮದ್ ಸಿರಾಜ್
ಜತೆಯಾಟದಲ್ಲಿ ದಾಖಲೆ ಬರೆದ ಸ್ಮಿತ್-ಹೆಡ್
ಈ ಪಂದ್ಯದಲ್ಲಿ ನಾಲ್ಕನೇ ವಿಕೆಟ್ಗೆ ಸ್ಮಿತ್ ಮತ್ತು ಹೆಡ್ ಸೇರಿಕೊಂಡು 285 ರನ್‌ಗಳ ಬೃಹತ್ ಜತೆಯಾಟ ನಡೆಸುವ ಮೂಲಕ 1936ರಲ್ಲಿ ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ ಮತ್ತು ಸ್ಟಾನ್ ವಾರ್ಥಿಂಗ್‌ಟನ್ ಅವರು ನಾಲ್ಕನೇ ವಿಕೆಟ್ಗೆ ಪೇರಿಸಿದ್ದ 266 ರನ್‌ಗಳ ಜತೆಯಾಟದ ದಾಖಲೆಯನ್ನು ಮುರಿದರು. ಇಲ್ಲಿಗೆ 87 ವರ್ಷಗಳ ಹಿಂದಿನ ದಾಖಲೆಯೊಂದು ಪತನಗೊಂಡಿತು.